

ಮೈಸೂರು: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಹುಣಸೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಎಚ್.ಪಿ. ಮಂಜುನಾಥ್ ವಾಗ್ದಾಳಿ ನಡೆಸಿದ್ದು, ಮಹಾರಾಣಿಯಾಗಿ ಮೆರೆಯಬೇಡಿ ಎಂದಿದ್ದಾರೆ.
ಜಿಲ್ಲಾ ಪಂಚಾಯಿತಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಡಿಸಿ ವಿರುದ್ಧ ಮಂಜುನಾಥ್ ಹರಿಹಾಯ್ದರು. ಮೈಸೂರಿಗೆ ಇಬ್ಬರು ಮಹಾರಾಣಿ (ಪ್ರಮೋದಾದೇವಿ, ತ್ರಿಶಿಕಾ) ಇದ್ದಾರೆ. ಮೂರನೇ ಮಹಾರಾಣಿಯ ಅವಶ್ಯಕತೆ ಇಲ್ಲ. ಮಹಾರಾಣಿಯಾಗಿ ಮೆರೆಯಬೇಡಿ. ಅಧಿಕಾರಿಯಾಗಿ ವರ್ತಿಸಿ, ಜನರ ಸಮಸ್ಯೆಗಳಿಗೆ ಸ್ಪಂದಿಸಿ ಎಂದರು.
ನಾನು ಬರೆದ ಒಂದು ಪತ್ರಕ್ಕೂ ಡಿಸಿ ಉತ್ತರ ನೀಡುತ್ತಿಲ್ಲ. ಹುಣಸೂರು ತಾಲೂಕಿನಲ್ಲಿ ಯಾವುದೇ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ಈ ಬಗ್ಗೆ ಗಮನ ಸೆಳೆದರೂ ಡಿಸಿ ಸ್ಪಂದಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾಡಹಬ್ಬದ ಗಜಪಯಣ ಸಂದರ್ಭ ಕ್ಷೇತ್ರದ ಶಾಸಕನಾದ ನನಗೆ ಆಹ್ವಾನ ನೀಡಲಿಲ್ಲ. ಗಜಪಯಣಕ್ಕೆ ನನ್ನನ್ನು ಆಹ್ವಾನಿಸಲಿಲ್ಲ. ನೀವೇ ಗಂಧದ ಕಡ್ಡಿ ಬೆಳಗಿದಿರಿ. ಆ ಕೆಲಸ ನಾವು ಮಾಡುತ್ತಿರಲಿಲ್ಲವೇ? ನಿಮಗೆ ಅಷ್ಟೊಂದು ಪ್ರಚಾರದ ಆಸಕ್ತಿ ಇದ್ದರೆ ಜಿಲ್ಲಾಧಿಕಾರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಚುನಾವಣೆಗೆ ಸ್ಪರ್ಧಿಸಿ ಎಂದರು.