

ಬಳ್ಳಾರಿ: ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಅಕ್ಕಿ ನೀಡುತ್ತಿಲ್ಲ ಎಂದು ಆರೋಪಿಸಿ ನಗರದ ರಾಯಲ್ ವೃತ್ತದಲ್ಲಿ ಜಿಲ್ಲಾ ಕಾಂಗ್ರೆಸ್ ಮಂಗಳವಾರ ಪ್ರತಿಭಟನೆ ನಡೆಸಿತು.
ಜಿಲ್ಲಾ ಉಸ್ತುವಾರಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ.ನಾಗೇಂದ್ರ ಮಾತನಾಡಿ, ಕರ್ನಾಟಕವನ್ನು ಹಸಿವುಮುಕ್ತ ಗೊಳಿಸಲು ಸಿದ್ದರಾಮಯ್ಯ ಸರ್ಕಾರ ಜಾರಿಗೊಳಿಸಲು ಹೊರಟಿರುವ ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಅಕ್ಕಿ ನೀಡಲ್ಲ ಎನ್ನುತ್ತಿದೆ. ಈ ಮೂಲಕ ಲಕ್ಷಾಂತರ ಬಡ ಕುಟುಂಬಗಳ ಹೊಟ್ಟೆ ಮೇಲೆ ಹೊಡೆಯಲು ಹೊರಟಿದೆ. ಯೋಜನೆ ವಿಫಲಗೊಳಿಸಲು ಸಂಚು ರೂಪಿಸುತ್ತಿದೆ.
ಇದು ಹಸಿವಿನಿಂದ ಕೂಡಿದ ರಾಜ್ಯದ ಜನರಿಗೆ ಅನ್ಯಾಯ ಮಾಡಿದೆ. ಅಲ್ಲದೆ ಅಕ್ಕಿ ನೀಡಲು ನೆರವಿಗೆ ಬಂದ ರಾಜ್ಯಗಳ ಮೇಲೆ ಒತ್ತಡ ಹಾಕಿ, ಹೆದರಿಸಿ ಕರ್ನಾಟಕಕ್ಕೆ ಅಕ್ಕಿ ಸಿಗದಂತೆ ಮಾಡಲು ಹೊರಟಿದೆ. ಇದನ್ನು ರಾಜ್ಯದ ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಈಗಾಗಲೇ ಹೀನಾಯ ಸೋಲಿನಿಂದ ಪಾಠ ಕಲಿಯದ ಬಿಜೆಪಿ ಮತ್ತೆ ಹಳೆಯ ಚಾಳಿ ಮುಂದುವರಿಸಿದ್ದು ಮುಂದಿನ ದಿನಗಳಲ್ಲಿ ಜನರು ತಕ್ಕಪಾಠ ಕಲಿಸಲಿದ್ದಾರೆ ಎಂದರು.
ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನುಡಿದಂತೆ ನಡೆಯುತ್ತಿದೆ. ಎಷ್ಟೇ ಅಡೆತಡೆಗಳು ಬಂದರೂ ಲೆಕ್ಕಿಸದೆ ರಾಜ್ಯದ ಜನರ ಹಸಿವು ನೀಗಿಸುವ ಯೋಜನೆಯನ್ನು ಜಾರಿ ಮಾಡಿಯೇ ತಿರುತ್ತೇವೆ. ಇನ್ನಾದರೂ ಕೇಂದ್ರ ಬಿಜೆಪಿಗರು ಅಭಿವೃದ್ಧಿ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದನ್ನು ನಿಲ್ಲಿಸಬೇಕು ಎಂದರು.
ಇದನ್ನೂ ಓದಿ:‘ಗ್ಯಾರಂಟಿ’ ಎಫೆಕ್ಟ್: ಬಿಪಿಎಲ್ ಕಾರ್ಡ್‌ಗೆ ಮುಗಿಬಿದ್ದ ಜನ; ಅರ್ಜಿ ಸ್ವೀಕಾರವನ್ನೇ ಸ್ಥಗಿತಗೊಳಿಸಿದ ಇಲಾಖೆ!
ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಮಾತನಾಡಿ, ರಾಜ್ಯದಲ್ಲಿ 1.17 ಕೋಟಿ ಬಿಪಿಎಲ್ ಕಾರ್ಡ್ ಹೊಂದಿರುವವರಿದ್ದಾರೆ. 3.97 ಕೋಟಿ ಜನರು ಸದಸ್ಯರಿದ್ದಾರೆ. ಗ್ರಾಮೀಣ ಭಾಗದ ಬಡವರಿಗಾಗಿ ಅನ್ನಭಾಗ್ಯ ಯೋಜನೆ ಜಾರಿಗೊಳಿಸಲು ಕಾಂಗ್ರೆಸ್ ಗ್ಯಾರಂಟಿ ನೀಡಿದೆ. ಆದರೆ ಬಿಜೆಪಿ ಸರ್ಕಾರ ಅದಕ್ಕೆ ಅಡ್ಡಗಾಲು ಹಾಕುತ್ತಿದೆ. ಕೇಂದ್ರ ಸರ್ಕಾರ ಉದ್ದೇಶ ಪೂರ್ವಕವಾಗಿ ಸೇಡು ತೀರಿಸಿಕೊಳ್ಳಲು ಮಾಡುತ್ತಿರುವ ಹುನ್ನಾರ. ರಾಜ್ಯದ ಜನರು ಕೇಂದ್ರ ಸರ್ಕಾರಕ್ಕೆ ತಕ್ಕಪಾಠ ಕಲಿಸಲಿದ್ದಾರೆ. ಡಬಲ್ ಇಂಜಿನ್ ಸರ್ಕಾರದಲ್ಲಿ ಒಂದು ಇಂಜಿನ್ ಕಳಚಿದೆ. ಮತ್ತೊಂದು ಇಂಜಿನ್ ಕೂಡ ಹಾಳಾಗಲಿದೆ ಎಂದರು.
ಸಂಡೂರು ಶಾಸಕ ಈ.ತುಕಾರಾಮ್, ಪಾಲಿಕೆ ಮೇಯರ್ ಡಿ.ತ್ರಿವೇಣಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಹಮದ್ ರಫೀಕ್, ಯುವ ಮುಖಂಡ ಅಲ್ಲಂ ಪ್ರಶಾಂತ್ ಇತರರಿದ್ದರು.