More

    ‘ಗ್ಯಾರಂಟಿ’ ಎಫೆಕ್ಟ್: ಬಿಪಿಎಲ್ ಕಾರ್ಡ್‌ಗೆ ಮುಗಿಬಿದ್ದ ಜನ; ಅರ್ಜಿ ಸ್ವೀಕಾರವನ್ನೇ ಸ್ಥಗಿತಗೊಳಿಸಿದ ಇಲಾಖೆ!

    ಬೆಂಗಳೂರು: ರಾಜ್ಯದಲ್ಲಿ ಇಂದಷ್ಟೇ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ವಿಧಾನಸಭೆ ಚುನಾವಣೆ ವೇಳೆ ಜನರಿಗೆ ನೀಡಿದ ಉಚಿತ ಕೊಡುಗೆಗಳ ಭರವಸೆಗಳನ್ನು ಈಡೇರಿಸುವುದು ನಿಚ್ಚಳವಾಗಿದೆ. ಆದರೆ ಆ ಕೊಡುಗೆಗಳನ್ನು ಬಡವರಿಗೆ ಮಾತ್ರ ಸೀಮಿತಗೊಳಿಸುವ ಎಲ್ಲ ಸಾಧ್ಯತೆ ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಈ ಉಚಿತ ಕೊಡುಗೆಗಳ ಲಾಭ ಪಡೆಯಲು ಉತ್ಸುಕರಾಗಿರುವ ಜನರು, ಬಿಪಿಎಲ್ ಕಾರ್ಡ್‌ಗಳನ್ನು ಮಾಡಿಸಿಕೊಳ್ಳಲು ನಾ ಮುಂದು ತಾ ಮುಂದು ಎಂದು ಮುಗಿಬೀಳತೊಡಗಿದ್ದಾರೆ.

    ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಪ್ರತಿ ಮನೆಗೂ 200 ಯೂನಿಟ್ ಉಚಿತ ವಿದ್ಯುತ್, ಮನೆಯ ಯಜಮಾನಿಗೆ ಪ್ರತಿ ತಿಂಗಳು 2000 ರೂ., ನಿರುದ್ಯೋಗಿ ಯುವ ಪದವೀಧರರಿಗೆ ಧನಸಹಾಯ, ಪ್ರತಿ ವ್ಯಕ್ತಿಗೆ 10 ಕಿಲೋ ಅಕ್ಕಿ ಉಚಿತ… ಹೀಗೆ 5 ಗ್ಯಾರಂಟಿಗಳನ್ನು ಕಾಂಗ್ರೆಸ್ ನೀಡಿದೆ. ಇವುಗಳನ್ನು ಮುಂದಿನ ದಿನಗಳಲ್ಲಿ ಅನುಷ್ಠಾನಗೊಳಿಸುವುದು ಗ್ಯಾರಂಟಿ ಎಂದೂ ಸ್ಪಷ್ಟಪಡಿಸಿದೆ.

    ಇದಕ್ಕೆ ಪೂರಕವಾಗಿ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಮೊದಲ ಸಚಿವ ಸಂಪುಟ ಸಭೆಯಲ್ಲೇ ತಾತ್ವಿಕ ಒಪ್ಪಿಗೆ ನೀಡುವ ನಿರ್ಧಾರಗಳನ್ನು ಕೈಗೊಂಡು ಅಧಿಕೃತ ಆದೇಶಗಳನ್ನೂ ಹೊರಡಿಸಿದ್ದಾರೆ. ಆದರೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತ್ರ, ಹಾದಿಬೀದಿಯಲ್ಲಿ ಹೋಗುವವರಿಗೆಲ್ಲ ಈ ಯೋಜನೆಗಳ ಲಾಭ ಸಿಗುವುದಿಲ್ಲ, ನಿಜಕ್ಕೂ ಬಡವರಿಗೆ ಅರ್ಹರಿಗೆ ಮಾತ್ರ ಸಿಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

    Ration Card Server

    ತಾತ್ಕಾಲಿಕವಾಗಿ ಸ್ಥಗಿತ

    ಇದೆಲ್ಲವನ್ನೂ ಗಮನಿಸಿರುವ ಸಾರ್ವಜನಿಕರು ತಮ್ಮ ಹೆಸರಿನಲ್ಲಿ ಬಿಪಿಎಲ್ ಕಾರ್ಡ್‌ಗಳನ್ನು ಮಾಡಿಸಿಕೊಳ್ಳಲು ಆಹಾರ, ನಾಗರಿಕ ಪೂರೈಕೆ ಮತ್ತು ಸಾರ್ವಜನಿಕ ಸರಬರಾಜು ಇಲಾಖೆಯ ವೆಬ್‌ಸೈಟ್‌ಗೆ ಮೊರೆ ಹೋಗಿದ್ದಾರೆ. ಕೆಲವರು ತಮ್ಮ ಮೊಬೈಲ್ ಮತ್ತು ಕಂಪ್ಯೂಟರ್‌ಗಳ ಸಹಾಯದಿಂದ ಆಹಾರ ಡಾಟ್ ಕೆಎಆರ್ ಡಾಟ್ ಎನ್‌ಐಸಿ ಡಾಟ್ ಇನ್ ವೆಬ್‌ಸೈಟ್ ಓಪನ್ ಮಾಡಲು ಪ್ರಯತ್ನಿಸುತ್ತಿದ್ದರೆ ಇನ್ನು ಕೆಲವರು ಸಮೀಪದ ಸೈಬರ್ ಸೆಂಟರ್‌ಗಳಿಗೆ ಹೋಗಿ ಬಿಪಿಎಲ್ ಕಾರ್ಡ್‌ಗಳನ್ನು ಮಾಡಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಹೆಚ್ಚು ಜನ ಒಂದೇ ಸಲಕ್ಕೆ ಪ್ರಯತ್ನ ಮಾಡುತ್ತಿರುವುದರಿಂದ ವೆಬ್‌ಸೈಟ್ ನಿಧಾನವಾಗಿದೆ. ಕೆಲವೆಡೆ ಓಪನ್ ಕೂಡ ಆಗುತ್ತಿಲ್ಲ.

    ಈ ಸಮಸ್ಯೆಯನ್ನು ಮನಗಂಡ ಆಹಾರ ಇಲಾಖೆಯವರು ಹೊಸ ಪಡಿತರ ಚೀಟಿ ನೀಡುವ ಪ್ರಕ್ರಿಯೆಯನ್ನೇ ತಾತ್ಕಾಲಿಕವಾಗಿ ನಿಲ್ಲಿಸಿದ್ದಾರೆ. ‘‘ಹೊಸ ಪಡಿತರ ಚೀಟಿಗಾಗಿ ಅರ್ಜಿ ಸ್ವೀಕರಿಸುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ’’ ಎಂದು ತಮ್ಮ ವೆಬ್‌ಸೈಟ್‌ನಲ್ಲೇ ಸ್ಪಷ್ಟವಾಗಿ ನಮೂದಿಸಿಬಿಟ್ಟಿದ್ದಾರೆ. ಇದರಿಂದಾಗಿ ನೂತನ ಸರ್ಕಾರದ ಉಚಿತ ಕೊಡುಗೆಗಳ ಲಾಭ ಪಡೆಯುವ ಸಲುವಾಗಿ ಹೊಸದಾಗಿ ಬಿಪಿಎಲ್ ಕಾರ್ಡ್ ಮಾಡಿಸಲು ಹೊರಟಿದ್ದ ಜನರಿಗೆ ನಿರಾಸೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts