ಹುಣಸೆ ಮರಗಳಿಂದಲೇ ಹುಣಸನಹಳ್ಳಿ ಪ್ರಚಲಿತ

Rmgm-Ph-05-Gramayana Hunasanahalli- Story Photo-Madagadakere -14-4-2024
Published on

* ಅರ್ಕಾವತಿ ನದಿ ಸರ್ವರ ಸಹಬಾಳ್ವೆಗೆ ಸಾಕ್ಷಿ

* ಜಿಲ್ಲೆಯಲ್ಲಿಯೇ ಪ್ರಥಮವಾಗಿ ಕೆರೆ ಕೋಡಿ ಹರಿಯುವುದು ವಿಶೇಷ

ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ

ಅರ್ಕಾವತಿ ನದಿ ದಂಡೆಯಲ್ಲಿ ಬೆಟ್ಟದ ಸಿರಿಯ ನಡುವೆ ಸದಾ ಹಸಿರು ಪ್ರಕೃತಿಯಲ್ಲಿ ಶೈಕ್ಷಣಿಕ, ಧಾರ್ಮಿಕ, ರಾಜಕೀಯ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತನ್ನದೆ ಆದ ಛಾಪು ಮೂಡಿಸಿ ಜಿಲ್ಲೆಯಲ್ಲಿ ಪ್ರಮುಖ ಗ್ರಾಮವಾಗಿ ಗುರುತಿಸಿಕೊಂಡು ಸರ್ವರ ಸಹಬಾಳ್ವೆಗೆ ಸಾಕ್ಷಿಯಾಗಿದೆ ರಾಮನಗರ ತಾಲೂಕಿನ ಕೈಲಾಂಚ ಹೋಬಳಿಯ ಹುಣಸನಹಳ್ಳಿ ಗ್ರಾಮ.

ಜಿಲ್ಲಾ ಕೇಂದ್ರದಿಂದ 6 ಕಿಮೀ ದೂರದಲ್ಲಿರುವ ಈ ಗ್ರಾಮದಲ್ಲಿ ಸುಮಾರು 1500 ಜನಸಂಖ್ಯೆ ಇದೆ. ಗ್ರಾಪಂ ಕೇಂದ್ರ ಸ್ಥಾನವಾಗಿದ್ದು, ಅಭಿವೃದ್ಧಿಯಲ್ಲೂ ಮುಂದಿದೆ. ಮೊದ ಮೊದಲು ಗರಿ ಶೆಡ್, ನಾಡಹೆಂಚಿನ ಮನೆಗಳು, ಮಣ್ಣಿನ ಬೀದಿ ರಸ್ತೆಗಳಿದ್ದ ಗ್ರಾಮದಲ್ಲಿ ಈಗ ಮಹಡಿ ಮನೆಗಳು, ಡಾಂಬರು ರಸ್ತೆಗಳು ನಿರ್ಮಾಣವಾಗಿವೆ.

ಗ್ರಾಮದ ಇತಿಹಾಸ: ಈ ಹಿಂದೆ ಗ್ರಾಮದ ಸುತ್ತಮುತ್ತಲೂ ಹೇರಳವಾಗಿ ಹುಣಸೆ ಮರಗಳಿಂದ ಆವೃತವಾಗಿ ಅರಣ್ಯದಂತೆ ಹುಣಸೆ ಮರಗಳು ಹೆಚ್ಚು ಇದ್ದವಂತೆ, ಈಗಲೂ ಕೂಡ ಅಲ್ಲಲ್ಲಿ ಹುಣಸೆ ಮರಗಳನ್ನು ಕಾಣಬಹುದಾಗಿದೆ. ಹಾಗಾಗಿ ಈ ಗ್ರಾಮವನ್ನು ಹುಣಸನಹಳ್ಳಿ ಎಂದು ಕರೆಯುತ್ತಿದ್ದರಿಂದ ಅದೇ ಹೆಸರು ಪ್ರಚಲಿತಗೊಂಡಿದೆ. ಗ್ರಾಮದ ಸರ್ಕಾರಿ ಜಾಗ, ಗೋಮಾಳ, ಖಾಸಗಿ ಜಮೀನಿನಲ್ಲಿ ಹೆಚ್ಚಾಗಿ ಹುಣಸೆ ಮರಗಳು ಇದ್ದ ಪರಿಣಾಮ ಗ್ರಾಮದಲ್ಲಿ ರೈತಾಪಿ ಕುಟುಂಬಗಳು ಹುಣಸೆ ಫಸಲಿನ ಸಮಯದಲ್ಲಿ ಒಂದಷ್ಟು ಆದಾಯ ಕಾಣುತ್ತಿದ್ದರು ಎನ್ನಲಾಗಿದೆ.

ದೇವಾಲಯಗಳು 

ಗ್ರಾಮದಲ್ಲಿ ಬಸವೇಶ್ವರ, ಮಾರಮ್ಮ, ಶನಿಮಹಾತ್ಮ, ಆಂಜನೇಯ ಮಹದೇಶ್ವರ, ಮುತ್ತರಾಯಸ್ವಾಮಿ ಗ್ರಾಮ ದೇವಸ್ಥಾನಗಳಿವೆ. ಪ್ರತಿ ವರ್ಷ ಹಬ್ಬ ಹರಿದಿನಗಳಲ್ಲಿ ವಿಶೇಷ ಪೂಜೆ ನಡೆಯುತ್ತವೆ. ಪ್ರತಿ ವರ್ಷ ಗ್ರಾಮದಲ್ಲಿ ಮಾರಮ್ಮ, ಬಸವೇಶ್ವರ ದೇವರ ಹಬ್ಬ ಆಚರನೆ ಮಾಡುವುದು ವಿಶೇಷ.

ಮಳೆ ಬರುತ್ತದೆ

ಹುಣಸನಹಳ್ಳಿಯಲ್ಲಿ ಬಂಡೆ ಮೇಲಿನ ಬೆಟ್ಟದಲ್ಲಿ ಮುತ್ತರಾಯಸ್ವಾಮಿ ಪಾದುಕೆ ಇದ್ದು, ದೇವಾಲಯ ನಿರ್ಮಾಣ ಮಾಡಲಾಗಿದೆ. ಮಳೆ ಇಲ್ಲದ ಸಂದರ್ಭದಲ್ಲಿ ಬೆಟ್ಟದಲ್ಲಿ ಗ್ರಾಮಸ್ಥರು ಪೂಜೆ ನಡೆಸಿ ಅನ್ನಸಂತರ್ಪಣೆ ನಡೆಸಿದರೆ ಮಳೆ ಬರುತ್ತದೆ ಎಂಬುದು ನಂಬಿಕೆಯಾಗಿದೆ. ಪೂಜೆ ನಡೆಸಿದ ಸಂದರ್ಭದಲ್ಲಿ ಮಳೆ ಬಂದಿರುವ ನಿದರ್ಶನಗಳು ಇವೆ ಎನ್ನುತ್ತಾರೆ ಗ್ರಾಮದ ಮೋಹನ್‌ರಾವ್.

ನದಿ ದಾಟುವುದು ತಪ್ಪಿದೆ

ಅರ್ಕಾವತಿ ನದಿ ದಂಡೆಯಲ್ಲಿಯೇ ಗ್ರಾಮ ಇದ್ದು, ಗ್ರಾಮದ ಸ್ವಲ್ಪ ದೂರದಲ್ಲೇ ಕನಕಪುರ-ರಾಮನಗರ ರಸ್ತೆ ಹಾದು ಹೋಗಿದೆ. ಮೊದಲು ನದಿ ದಾಟಿಯೇ ರಸ್ತೆ ಸಂಪರ್ಕ ಪಡೆಯಬೇಕಿತ್ತು. ಆಳವಾದ ನೀರಿನಲ್ಲಿ ಪರಿಪಾಟಲು ಪಟ್ಟು ನದಿ ದಾಟಬೇಕಿತ್ತು. ನದಿಗೆ ಬ್ರಿಡ್ಜ್ ನಿರ್ಮಾಣದ ಹಿನ್ನೆಲೆಯಲ್ಲಿ ಇಂದು ಉತ್ತಮ ಸಾರಿಗೆ ಸಂಪರ್ಕದ ಕೊಂಡಿಯಾಗಿ ಸುತ್ತಮುತ್ತಲಿನ ಜನರು ಇದೇ ಸೇತುವೆ ಬಳಸುತ್ತಿದ್ದಾರೆ.

ಸಾರ್ವಜನಿಕ ಸೇವೆ ಸೌಲಭ್ಯ

ಸರ್ಕಾರಿ ಮಾಧ್ಯಮಿಕ ಶಾಲೆ, ಅಂಗನವಾಡಿ ಗ್ರಾಪಂ ಕೇಂದ್ರ, ಗ್ರಂಥಾಲಯ, ಪಶು ಆಸ್ಪತ್ರೆ, ಕಿರು ಆರೋಗ್ಯ ಕೇಂದ್ರ, ಹಾಲಿನ ಡೇರಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿವೆ. ಗ್ರಾಪಂ ಚರಂಡಿ, ರಸ್ತೆ, ಕುಡಿಯುವ ನೀರು ಸಂಪರ್ಕ ಮತ್ತಿತರ ಮೂಲ ಸೌಲಭ್ಯ ಒದಗಿಸಿ ಗ್ರಾಮದ ಅಭಿವೃದ್ಧಿಗೆ ಉತ್ತಮ ಚಿತ್ರಣ ನೀಡಲಾಗಿದೆ.

ಕೆರೆ ಕೋಡಿ 

ಗ್ರಾಮದ ಸಮೀಪವೇ ಮದಗದ ಕೆರೆ ಇದ್ದು, ಕೆರೆ ಗ್ರಾಮದ ರೈತನ ಮಿತ್ರವಾಗಿದೆ. ಅಂತರ್ಜಲವೃದ್ಧಿಯಲ್ಲಿ ಕೆರೆ ಪ್ರಮುಖ ಪಾತ್ರವಹಿಸುತ್ತಿದೆ. ಬೇರೆ ಬೇರೆ ಕೆರೆಗಳು ತುಂಬದಿದ್ದರೂ ಹೆಚ್ಚಿನ ಮಳೆಯಾದರೆ ಒಂದೇ ದಿನದಲ್ಲಿ ಕೆರೆ ತುಂಬಿ ಕೋಡಿ ಹರಿಯುತ್ತದೆ. ಜಿಲ್ಲೆಯಲ್ಲಿಯೇ ಪ್ರಥಮವಾಗಿ ಕೆರೆ ಕೋಡಿ ಹರಿಯುವುದು ವಿಶೇಷ.

ಹುಣಸನಹಳ್ಳಿ ಗ್ರಾಮ ರಾಜಕೀಯ, ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಸದಾ ಮುಂದಿದೆ. ಜತೆಗೆ ಸುಂದರ ಪ್ರಕೃತಿಯ ಸೊಬಗು ಗ್ರಾಮವನ್ನು ಮತ್ತಷ್ಟು ಶಿಖರಕ್ಕೆ ಕೊಂಡೊಯ್ದಿದೆ. ಸರ್ವ ಜನಾಂಗವೂ ಒಟ್ಟಿಗೆ ಜೀವನ ನಡೆಸುತ್ತಾ ಸಂತೋಷದ ಬದುಕು ಕಟ್ಟಿಕೊಂಡು ಸೌಹಾರ್ದದಲ್ಲಿ ನೆಲೆನಿಂತ ಗ್ರಾಮವಾಗಿರುವುದು ನಮ್ಮ ಹೆಮ್ಮೆಯಾಗಿದೆ.

ಗೋಪಿ(ನಂಜಪ್ಪ), ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ, ಹುಣಸನಹಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net