ಮಾನವೀಯ ಗುಣ ಬೆಳೆಸಿಕೊಳ್ಳಿ ಎಂದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

294 (2)
Published on

ಸಾಣೇಹಳ್ಳಿ: ಮಾನವೀಯತೆಯ ಅಂತಃಕರಣದ ಗುಣಗಳನ್ನು ಎಲ್ಲರೂ ಬೆಳೆಸಿಕೊಳ್ಳಬೇಕು ಎಂದು ಡಾ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಸಾಣೇಹಳ್ಳಿಯ ಎಸ್.ಎಸ್. ರಂಗಮಂದಿರದಲ್ಲಿ ಆಯೋಜಿಸಿದ್ದ ಮಕ್ಕಳ ಹಬ್ಬ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದರು.

ಮಕ್ಕಳಲ್ಲಿರುವ ಆಸಕ್ತಿ ಗುರುತಿಸಿ ಪೋಷಿಸುವ ಕೆಲಸ ಪಾಲಕರಿಂದಾಗಬೇಕು. ಮಕ್ಕಳ ಜೀವನವೇ ಒಂದು ಸೌಭಾಗ್ಯ. ಮಗುವಿನ ಮುಗ್ಧತೆ ಇದ್ದರೆ ಬದುಕಿನಲ್ಲಿ ಸಂತೋಷ ಕಾಣಬಹುದು ಎಂದರು.

ಮಕ್ಕಳು ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಬದುಕು ಕಟ್ಟಿಕೊಳ್ಳಬೇಕು. ಮಕ್ಕಳಿಗೆ ಪ್ರೋತ್ಸಾಹ ಸಿಕ್ಕರೆ ಏನು ಬೇಕಾದರೂ ಸಾಧಿಸುತ್ತಾರೆ. ಅವರಿಗೆ ಏನೇ ವಿಷಯ ಕಲಿಸಿದರೂ ತಕ್ಷಣ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿರುತ್ತಾರೆ. ಎಂತಹ ವಿಷಯಗಳನ್ನು ಬಿತ್ತಬೇಕು ಎನ್ನುವ ಅರಿವು ಬಿತ್ತುವಂಥವರಿಗೆ ಇರಬೇಕು ಎಂದು ಅಭಿಪ್ರಾಯಪಟ್ಟರು.

ಪ್ರಯತ್ನಪಟ್ಟರೆ ಒಂದು ದಿನ ಫಲ ಸಿಕ್ಕೇ ಸಿಗುತ್ತದೆ. ಯಾವ ಮಕ್ಕಳನ್ನು ದಡ್ಡರೆಂದು ಭಾವಿಸಬಾರದು. ಅವರಿಗೆ ಬೆನ್ನು ತಟ್ಟಿ ಪ್ರೋತ್ಸಾಹಿಸಿದರೆ ಬಹಳ ಎತ್ತರದ ಸ್ಥಾನಕ್ಕೆ ಏರುತ್ತಾರೆ. ಪರಿಶ್ರಮದಿಂದ ದಡ್ಡರೂ ಬುದ್ಧಿವಂತರಾಗಲು ಸಾಧ್ಯವಿದೆ ಎಂದರು.

ಪ್ರೊ. ಚಂದ್ರಶೇಖರ್ ಮಾತನಾಡಿ, ಸಾಣೇಹಳ್ಳಿ ಶ್ರೀಗಳು ಮಕ್ಕಳ ಪ್ರತಿಭೆಗೆ ನೀರೆರೆದು ಪೋಷಣೆ ಮಾಡುತ್ತಾ ಬಂದಿದ್ದಾರೆ. ಸಾಧನೆಗೆ ಯಾವುದೇ ಮಿತಿ ಇಲ್ಲ. ಅದು ಸಾಧಕನ ಸ್ವತ್ತು ಎಂದರು.

ಬುದ್ಧಿವಂತರಿಗಿಂತ ಹೃದಯವಂತರು ಬೇಕು. ಹೃದಯವಂತಿಕೆ ಕಲೆಗಳ ಮೂಲಕ ಲಭಿಸುತ್ತದೆ. ಬರೀ ಓದಿನಲ್ಲೇ ಇದ್ದರೆ ಯಾಂತ್ರಿಕ ವ್ಯಕ್ತಿಯಾಗುವರು ಎಂದು ಅಭಿಪ್ರಾಯಪಟ್ಟರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಸಿ. ಭರತ್, ಮಕ್ಕಳು ಹೇಗೆ ಯೋಚನೆ ಮಾಡಬೇಕೆಂಬುದನ್ನು ಪಾಲಕರು ಕಲಿಸಿಕೊಡಬೇಕು. ಆಗ ಮಾತ್ರ ಮಗು ತಾನು ಅಂದುಕೊಂಡ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಮಕ್ಕಳು ಈಗಿನಿಂದಲೇ ದೊಡ್ಡ ಗುರಿ ಇಟ್ಟುಕೊಳ್ಳಬೇಕು ಎಂದರು.

ಒಳ್ಳೆಯ ಪುಸ್ತಕ ಓದಿದರೆ, ಹಾಡು ಕೇಳಿದರೆ ಮನಸ್ಸಿನ ಒತ್ತಡ ಕಡಿಮೆಯಾಗುತ್ತದೆ. ಬಸವತತ್ವದ ವಿಚಾರಗಳನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದರು.

ಮುಖ್ಯ ಅತಿಥಿಯಾಗಿದ್ದ ಬಸವರಾಜ ನೆಲ್ಲಿಸರ ಮಾತನಾಡಿ, ಶ್ರಮ, ಶ್ರದ್ಧೆ, ಶಿಸ್ತು ಇದ್ದರೆ ಜೀವನದಲ್ಲಿ ಏನಾದರೂ ಸಾಧನೆ ಮಾಡಲು ಸಾಧ್ಯ. ಅದಕ್ಕೆ ಪೂರಕವಾಗಿ ಜ್ಞಾನಾರ್ಜನೆ ಬೆಳೆಸಿಕೊಳ್ಳಬೇಕು ಎಂದರು.

ಶಿಬಿರಾರ್ಥಿಗಳಿಂದ ವಚನ ಗಾಯನ, ಯೋಗ ಪ್ರಾತ್ಯಕ್ಷಿಕೆ, ನೃತ್ಯರೂಪಕ, ನಾಯಿ ಮರಿ, ಗೋರುಕಾನ, ಪುಟ್ಟ ಕತೆ, ಬುದ್ಧಿವಂತ ಮಂಕಿ, ನಚಿಕೇತಾಗ್ನಿ ನಾಟಕಗಳು ಪ್ರದರ್ಶನಗೊಂಡವು. ಶಿವಸಂಚಾರದ ಕಲಾವಿದರು ವಚನಗೀತೆಗಳನ್ನು ಹಾಡಿದರು. ಶಿಬಿರದ ಸಂಚಾಲಕ ನಟರಾಜ ಹೊನ್ನವಳ್ಳಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net