ಜನಪದ ಸಾಹಿತ್ಯದಲ್ಲಿದೆ ಮಾನವೀಯ ಮೌಲ್ಯ

FotoJet (2)
Published on

ಕನಕಪುರ : ತಾಲೂಕಿನ ಚಿಕ್ಕಮುದವಾಡಿ ಶ್ರೀ ಶನೈಶ್ಚರ ದೇವಸ್ಥಾನದ ಆವರಣದಲ್ಲಿ ಬಿಜ್ಜಹಳ್ಳಿ ಸುಗ್ಗಿ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಸ್ಥೆಯಿಂದ ಜಾನಪದ ಉತ್ಸವ ಆಯೋಜಿಸಲಾಗಿತ್ತು. ಜಾನಪದ ಮೆರವಣಿಗೆಗೆ ದೇವರಾಜು ಸ್ವಾಮೀಜಿ ನಗಾರಿ ಭಾರಿಸುವ ಮೂಲಕ ಚಾಲನೆ ನೀಡಿದರು.

ಪೂಜಾ, ಡೊಳ್ಳು, ವೀರಗಾಸೆ ಕುಣಿತ, ಚಿಲಿಪಿಲಿ ಗೊಂಬೆ, ತಮಟೆ ನಗಾರಿ ನೀಲಗಾರರ ಪದ ಹೀಗೆ ಹಲವಾರು ನೃತ್ಯಗಳು ಮೆರವಣಿಗೆಯಲ್ಲಿ ಗ್ರಾಮಸ್ಥರ ಮನಸೂರೆಗೊಂಡವು.

ನೂರೊಂದುಸ್ವಾಮಿ ಬೆಟ್ಟದ ಶ್ರೀ ಶಿವಲಿಂಗಸ್ವಾಮೀಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಆಶೀರ್ವಚನ ನೀಡಿ, ನಮ್ಮ ನಾಡಿನ ಸಂಸ್ಕೃತಿ, ಸಂಪ್ರದಾಯಗಳನ್ನು ಒಳಗೊಂಡಿರುವ ಜಾನಪದ ಸಂಗೀತ, ಕಲೆ ನಮ್ಮ ಜೀವನದ ಕ್ರಮಗಳನ್ನು ಕಲಿಸುತ್ತದೆ, ಜಾನಪದದ ವಿವಿಧ ಪ್ರಕಾರಗಳು ಜಗತ್ತಿನ ಯಾವುದೇ ದೇಶದಲ್ಲಿ ಕಾಣುವುದಿಲ್ಲ, ಜಾನಪದ ಕಲೆ ಜಾಗತೀಕರಣವಾಗಿದ್ದು, ಮಾನವೀಯ ಮೌಲ್ಯಗಳನ್ನು ಒತ್ತಿ ಹೇಳುತ್ತದೆ ಎಂದರು.

ಸುಗ್ಗಿ ಸಾಂಸ್ಕೃತಿಕ ಸಂಸ್ಥೆಯ ಜಾನಪದ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ನಿರಂತರ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ, ಸಂಸ್ಥೆಯ ಕಾರ್ಯದರ್ಶಿ ಕಾಳಯ್ಯನವರ ಜಾನಪದ ಕಳಕಳಿಗೆ ಜನರ ಸಹಕಾರ ಅಗತ್ಯವಾಗಿದೆ ಎಂದರು. ಸಂಸ್ಥೆಯ ಕೆ.ಶಿವರಾಮು, ಚನ್ನಬೋರಯ್ಯ, ಆಲನಾಥ ರಮೇಶ್, ರಾಜು, ದುಂಡುಮಾದೇಗೌಡ ಅನೇಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net