

ಪೌರಕಾರ್ಮಿಕ ಸಂಘದ ಅಧ್ಯಕ್ಷ ಸೇರಿ ಇಬ್ಬರ ವಿರುದ್ಧ ದೂರು
ಚನ್ನಪಟ್ಟಣ
ಶೌಚಗುಂಡಿ ಸ್ವಚ್ಛತೆಗೆ ಮಾನವ ಬಳಕೆ ಮಾಡಲಾಗಿದೆ ಎಂಬ ಆರೋಪಡಿ ನಗರಸಭೆ ನೇರ ಪಾವತಿ ಪೌರಕಾರ್ಮಿಕರ ಸಂಘದ ಅಧ್ಯಕ್ಷ ಮಹೇಂದ್ರ ಹಾಗೂ ಮನೆಯ ಮಾಲೀಕ ಉಸ್ಮಾನ್ ಆಲಿಖಾನ್ ವಿರುದ್ಧ ನಗರದ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೆ.10ರಂದು ನಗರದ ಜೀವನಪುರ್ ಮೊಹಲ್ಲಾದಲ್ಲಿ ಉಸ್ಮಾನ್ ಆಲಿಖಾನ್ ಅವರ ಮನೆಯ ಶೌಚಗುಂಡಿಯನ್ನು ಮಾನವ ಬಳಕೆ ಮೂಲಕ ಸ್ವಚ್ಛಗೊಳಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ನಗರಸಭೆಯ ಪೌರಕಾರ್ಮಿಕರು ಈ ಶೌಚಗುಂಡಿ ಸ್ವಚ್ಛಗೊಳಿಸುತ್ತಿದ್ದಾರೆ ಎನ್ನಲಾದ ಫೋಟೋಗಳು ವೈರಲ್ ಆಗಿದ್ದವು.
ಸೂಕ್ಷ್ಮ ವಿಚಾರವಾದ ಹಿನ್ನೆಲೆಯಲ್ಲಿ ಈ ಬಗ್ಗೆ ಆಂತರಿಕ ವಿಚಾರಣೆ ನಡೆಸಿದ ಪೌರಾಯುಕ್ತ ಪುಟ್ಟಸ್ವಾಮಿ, ಈ ವಿಚಾರಕ್ಕೆ ಸಂಬಂಧಿಸಿದಂತೆ, ನಗರಸಭೆ ನೇರಪಾವತಿ ಪೌರಕಾರ್ಮಿಕ ಮಹೇಂದ್ರ ಸೇರಿ ಹಲವರ ವಿರುದ್ಧ ನಗರದ ಪೂರ್ವ ಠಾಣೆಯಲ್ಲಿ ಸೆ.14ರಂದು ದೂರು ಸಲ್ಲಿಸಿದರು. ಈ ಹಿನ್ನೆಲೆಯಲ್ಲಿ ಶೌಚಗುಂಡಿ ಸ್ಚಚ್ಛಗೊಳಿಸಲು ಕಾರ್ಮಿಕರನ್ನು ಕರೆದುಕೊಂಡು ಹೋಗಿದ್ದ ಎನ್ನಲಾದ ಮಹೇಂದ್ರ ಹಾಗೂ ಮನೆಯ ಮಾಲೀಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರಸಭೆ ಪೌರಾಯುಕ್ತ ಪುಟ್ಟಸ್ವಾಮಿ ಹಾಗೂ ಪರಿಸರ ವಿಭಾಗದ ಅಧಿಕಾರಿಗಳ ವಿರುದ್ಧ ಶುಕ್ರವಾರ ಪ್ರತಿದೂರು ಸಲ್ಲಿಸಲಾಗಿದೆ.
ಶೌಚಗುಂಡಿ ಸ್ವಚ್ಛತೆಗೆ ಪೌರಕಾರ್ಮಿಕರನ್ನು ಎಂ.ಎಸ್. ಕಾಯ್ದೆ ಉಲ್ಲಂಘಿಸಿರುವ ಹಾಗೂ ಘಟನೆ ನಡೆಯುತ್ತಿರುವುದನ್ನು ತಿಳಿಸಿದರೂ ತಡೆಗಟ್ಟಲು ವಿಫಲಗೊಂಡಿರುವ ಪೌರಾಯುಕ್ತ ಹಾಗೂ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ದಲಿತ ಸಂಘರ್ಷ ಸಮಿತಿ ವಿಭಾಗೀಯ ಸಂಚಾಲಕ ಶಿವರಾಜ್ ಮರಳಿಗ ಪೂರ್ವ ಠಾಣೆಯಲ್ಲಿ ಪ್ರತಿದೂರು ಸಲ್ಲಿಸಿದ್ದಾರೆ.
ನಗರಸಭೆ ಅಧಿಕಾರಿಗಳು ಕರ್ತವ್ಯಲೋಪ ಮುಚ್ಚಿಕೊಳ್ಳಲು ಮಾಹಿತಿ ಕೊಟ್ಟವನನ್ನೇ ಅಪರಾಧಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೌರಾಯುಕ್ತ ಸೇರಿ ಪರಿಸರ ವಿಭಾಗದ ಅಭಿಯಂತರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.
ಪ್ರಕರಣದ ಬೆನ್ನಲ್ಲೇ ನಗರಸಭೆಗೆ ಭೇಟಿ ನೀಡಿದ ಪೌರಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಹಾಗೂ ಸಾಯಿ ಕರ್ಮಚಾರಿ ಸಂಘದ ಮಾಜಿ ರಾಜ್ಯಾಧ್ಯಕ್ಷ ನಾರಾಯಣ್, ಜಿಲ್ಲಾಧ್ಯಕ್ಷ ಚಲಪತಿ, ರಾಜ್ಯ ಸಂಚಾಲಕ ಮದ್ದೂರು ಶ್ರೀನಿವಾಸ್ ಮತ್ತಿತರ ಪೌರಕಾರ್ಮಿಕ ಮುಖಂಡರು ನಗರಸಭೆ ಹಾಗೂ ಪೊಲೀಸ್ ಅಧಿಕಾರಿಗಳ ಜತೆ ಚರ್ಚೆ ನಡೆಸಿ, ಪೌರಕಾರ್ಮಿಕನ ವಿರುದ್ಧ ಪ್ರಕರಣ ದಾಖಲಿಸಿರುವ ಪೌರಾಯುಕ್ತರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.