ಮಾನವ-ಆನೆ ಸಂಘರ್ಷ ಮುಕ್ತಿಗೆ ಪರಿಹಾರ ಹುಡುಕಬೇಕು

ಮಾನವ-ಆನೆ ಸಂಘರ್ಷ ಮುಕ್ತಿಗೆ ಪರಿಹಾರ ಹುಡುಕಬೇಕು
Published on

ಬೇಲೂರು: ಇತ್ತೀಚಿನ ದಿನಗಳಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು ಮಲೆನಾಡು ಪ್ರದೇಶದ ಜನರು ಆತಂಕದ ಸ್ಥಿತಿಯಲ್ಲಿದ್ದು, ಮಾನವ ಮತ್ತು ಆನೆಗಳ ಸಂಘರ್ಷ ಮುಕ್ತಿಗೆ ಪರಿಹಾರ ಹುಡುಕಬೇಕಿದೆ ಎಂದು ರಾಷ್ಟ್ರೀಯ ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್ ಹೇಳಿದರು.

ತಾಲೂಕಿನ ಗೆಂಡೇಹಳ್ಳಿ ಸಮೀಪದ ಕೆಂಜಿಗೆ ಗುಡ್ಡದ ಜಿ.ಕೆ.ಕುಮಾರ್ ಅವರ ತೋಟದಲ್ಲಿ ಭಾನುವಾರ ಸಂಜೆ ಜಿಲ್ಲಾ ಪ್ಲಾಂಟರ್ಸ್‌ ಸಂಘದಿಂದ ಆಯೋಜಿಸಿದ್ದ ಕಾಫಿ ಹಾಗೂ ಕಾಳು ಮೆಣಸು ಬೆಳೆಗೆ ರಸಗೊಬ್ಬರ ಮತ್ತು ಫೋಲಿಯರ್ ಸ್ಟ್ರೇ ನಿರ್ವಹಣೆ ತಾಂತ್ರಿಕ ಅಧಿವೇಶನ ಮತ್ತು ವಿಚಾರ ಮಂಡನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಾಡಾನೆ ಸಮಸ್ಯೆ ತಡೆಗೆ ಸಮಿತಿಯೊಂದನ್ನು ರಚಿಸಲು ಪ್ಲಾಂಟರ್ಸ್‌ ಸಂಘ ಮುಂದಾಗಿದೆ. ಇದಕ್ಕೆ ಡಾ.ಸುರೇಂದ್ರ ಶರ್ಮಾ ಎಂಬುವರ ನೇತೃತ್ವದಲ್ಲಿ ಸಮಿತಿಯು ವಿಶೇಷ ಅಧ್ಯಯನದ ಮೂಲಕ ಪರಿಹಾರ ಸಾಧ್ಯತೆ ಕಂಡು ಹಿಡಿಯಲಿದೆ. ಇದಕ್ಕೆ ಪ್ರತಿಯೊಬ್ಬರೂ ಸಹಕಾರ ನಿಡಬೇಕಿದೆ ಎಂದರು.

ಬಾಳೆಹೊನ್ನೂರು ಕೇಂದ್ರಿಯ ಕಾಫಿ ಸಂಶೋಧನಾ ಸಂಸ್ಥೆಯ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಪಿ.ಶಿವಪ್ರಸಾದ್ ಮಾತನಾಡಿ, ಕಾಫಿ ಕೃಷಿಯನ್ನು ಪ್ರಾರಂಭಿಸುವ ಮುನ್ನ ಮಣ್ಣಿನ ಪರೀಕ್ಷೆ ಅಗತ್ಯವಾಗಿ ನಡೆಸಬೇಕು. ಅದರ ಆಧಾರದ ಮೇಲೆ ಗಿಡಗಳಿಗೆ ಪೋಷಕಾಂಶ ಒದಗಿಸಬೇಕು. ಕಾಫಿ ತನ್ನ ವಿಶೇಷ ಗುಣದಿಂದ ವಿಶ್ವದಲ್ಲಿ ವಿಶಿಷ್ಟ ಸ್ಥಾನ ಹೊಂದಿದೆ. ಅಗತ್ಯ ಪ್ರಮಾಣದಲ್ಲಿ ಗಿಡಗಳಿಗೆ ನೀರು, ನೆರಳನ್ನು ದೊರಕುವಂತೆ ಮಾಡಿ ವೈಜ್ಞಾನಿಕ ವಿಧಾನಗಳ ಮೂಲಕ ಲಾಭದಾಯಕ ವೃತ್ತಿಯಾಗಿಸಬಹುದು ಎಂದರು.

ಕರ್ನಾಟಕ ಬೆಳೆಗಾರರ ಸಂಘದ ಅಧ್ಯಕ್ಷ ಡಾ.ಎಚ್.ಟಿ.ಮೋಹನ್‌ಕುಮಾರ್ ಮಾತನಾಡಿ, ಕಾಫಿ ಬೆಳೆ ಪ್ರಸ್ತುತ ಬೆಳೆಗಾರರ ಸಂಕಷ್ಟಕ್ಕೆ ಕಾರಣವಾಗಿದೆ. ಅತಿವೃಷ್ಟಿ ಮತ್ತು ಅನಾವೃಷ್ಟಿ, ಕಾಡಾನೆ ಸಮಸ್ಯೆಯಿಂದ ಬೆಳೆಗಾರರು ಕಾಫಿ ಕೃಷಿ ಬಗ್ಗೆ ಆಸಕ್ತಿ ಕಳೆದುಕೊಳ್ಳುವ ಪರಿಸ್ಥಿತಿಗೆ ಬಂದಿದ್ದಾರೆ. ಪ್ರತಿ ಕಾಫಿ ಬೆಳೆಗಾರರು ತಮ್ಮ ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ವಿಮೆಯೊಂದಿಗೆ ಕೆಲಸ ಮಾಡಿಸುವುದು ಸೂಕ್ತ ಎಂದರು.

ಪ್ರಗತಿಪರ ಕೃಷಿಕ ಕರಣ್ ಗೌತಳ್ಳಿ ಫೋಲಿಯರ್ ಸ್ಟ್ರೇ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು. ವಿಚಾರ ಮಂಡನೆ ಕಾರ್ಯಕ್ರಮ ನಿರ್ವಹಿಸಿದ ಜಿ.ಕೆ.ಕುಮಾರ್ ದಂಪತಿಯನ್ನು ಅಭಿನಂದಿಸಲಾಯಿತು. ಜಿಲ್ಲಾ ಕಾಫಿ ಪ್ಲಾಂಟರ್ಸ್‌ ಸಂಘದ ಅಧ್ಯಕ್ಷ ಎ.ಎಸ್.ಪರಮೇಶ್, ಹಿರಿಯ ಕಾಫಿ ಬೆಳೆಗಾರ ಬಿ.ಎಂ.ಮೋಹನ್ ಕುಮಾರ್, ಎಚ್‌ಡಿಪಿಎ ಗೌರವ ಕಾರ್ಯದರ್ಶಿ ಕೆ.ಬಿ.ಲೋಹಿತ್, ಎಚ್‌ಡಿಪಿಎ ಟ್ರಸ್ಟ್ ಅಧ್ಯಕ್ಷ ತೊ.ಚ.ಅನಂತಸುಬ್ಬರಾಯ, ಉಪಾಧ್ಯಕ್ಷ ಮಂಜುನಾಥಶೆಟ್ಟಿ, ಖಜಾಂಚಿ ಎಂ.ಜೆ.ಸಚ್ಚಿನ್, ಮುಖಂಡ ಶ್ರೀನಿವಾಸ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net