ಬೃಹತ್​ ಮಾನವ ಸರಪಳಿಗೆ ಸಿಕ್ಕಿತು 2 ಪ್ರಶಸ್ತಿ

Manava_Sarapali_Award
Published on

ತುಮಕೂರು: ಪ್ರಜಾಪ್ರಭುತ್ವದ ಬಗ್ಗೆ ಜನ ಜಾಗೃತಿ ಮೂಡಿಸಲು ಕಳೆದ ಸೆ.15ರಂದು ಜಿಲ್ಲೆಯಲ್ಲಿ 90 ಕಿ.ಮೀ., ಉದ್ದದ ಬೃಹತ್​ ಮಾನವ ಸರಪಳಿ ನಿರ್ಮಿಸಲಾಗಿದ್ದು ಇದೀಗ ಜಿಲ್ಲಾಡಳಿತದ ಈ ಶ್ರಮಕ್ಕೆ ರಾಜ್ಯ ಸರ್ಕಾರ ಎರಡು ಪ್ರಶಸ್ತಿ ನೀಡಿ ಗೌರವಿಸಿದೆ.

ಜಿಲ್ಲೆಯ ಗಡಿ ಶಿರಾ ತಾಲೂಕು ತಾವರೆಕೆರೆಯಿಂದ ಹಿರೇಹಳ್ಳಿಯ ಗಡಿ ನಂದಿಹಳ್ಳಿಯವರೆಗೆ 90 ಕಿ.ಮೀ., ಉದ್ದದ ಮಾನವ ಸರಪಳಿಯನ್ನು ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ರಚಿಸಲಾಗಿತ್ತು. ಈ ಬೃಹತ್​ ಮಾನವ ಸರಪಳಿ ರಚನೆಯಲ್ಲಿ ಅತೀ ಹೆಚ್ಚು ಸ್ವಯ ಸೇವಾ ಸಂಸ್ಥೆಗಳು ಮತ್ತು ಖಾಸಗಿ ಸಂಸ್ಥೆಗಳ ಭಾಗವಹಿಸುವಿಕೆ ವಿಭಾಗದಲ್ಲಿ ಪ್ರಥಮ ಹಾಗೂ ಅತಿ ಹೆಚ್ಚು ಖಾಸಗಿ ಕಂಪನಿಗಳ ಭಾಗವಹಿಸುವಿಕೆ ವಿಭಾಗದಲ್ಲಿ ದ್ವೀತಿಯ ಸೇರಿ 2 ಪ್ರಶಸ್ತಿಗಳು ಜಿಲ್ಲೆಯ ಪಾಲಾಗಿದ್ದು ಮಂಗಳವಾರ ಸಿಎಂ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಿದರು. ಬೆಂಗಳೂರಿನ ಅಂಬೇಡ್ಕರ್​ ಭವನದಲ್ಲಿ ನಡೆದ ಸಂವಿಧಾನ ದಿನಾಚರಣೆ ವೇಳೆ ಪ್ರಶಸ್ತಿಯನ್ನು ಸಿಎಂ ಸಿದ್ದರಾಮಯ್ಯ ಜಿಲ್ಲಾಧಿಕಾರಿ ಶುಭ ಕಲ್ಯಾಣ್​ ಹಾಗೂ ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ ಅವರಿಗೆ ಪ್ರದಾನ ಮಾಡಿದರು.

ಮಾನವ ಸರಪಳಿ ಕಾರ್ಯಕ್ರಮವನ್ನು ಯಸ್ವಿಗೊಳಿಸಿ ಜಿಲ್ಲೆಗೆ ಪ್ರಶಸ್ತಿ ಲಭಿಸಲು ಕಾರಣರಾದ ಎಲ್ಲಾ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ, ಮಾಧ್ಯಮಪ್ರತಿನಿಧಿಗಳು, ಸಂಘ ಸಂಸ್ಥೆ, ಸಾರ್ವಜನಿಕರಿಗೆ ಜಿಲ್ಲಾಧಿಕಾರಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಪ್ರಶಸ್ತಿ ಸ್ವೀಕರಿಸಿದ ನಂತರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ ಪರಮೇಶ್ವರ್​ರನ್ನು ಭೇಟಿ ಮಾಡಿ ಶುಭಕಲ್ಯಾಣ್​ ಸಂತಸ ಹಂಚಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net