

ಶ್ರೀರಂಗಪಟ್ಟಣ: ಸಮಾಜ ಕಲ್ಯಾಣ ಇಲಾಖೆ ಕರೆ ನೀಡಿದ್ದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ಭಾನುವಾರ ನಡೆದ ಮಾನವ ಸರಪಳಿ ಸಾಕಷ್ಟು ವಿಶೇಷತೆ ಹಾಗೂ ವೈಫಲ್ಯತೆಗಳ ನಡುವೆ ಮುಕ್ತಾಯಗೊಂಡಿತು.
ವಿಧಾನಸಭಾ ಕ್ಷೇತ್ರದ ಗಡಿ ರಾಗಿಮುದ್ದನಹಳ್ಳಿ ಗೇಟ್ ಮುಂಭಾಗದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಿಂದ ಪ್ರಾರಂಭವಾಗಿ ಮೈಸೂರು ಜಿಲ್ಲೆಯ ಗಡಿ ಕಳಸ್ತವಾಡಿ ಗ್ರಾಮದವರೆಗೂ 21ಕಿ.ಮೀ.ವರೆಗೂ ಬೆಳಗ್ಗೆ 9.30ರಿಂದ 10ವರೆಗೆ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಶಿಕ್ಷಣ, ಆರೋಗ್ಯ, ಕೃಷಿ ಹಾಗೂ ಎಲ್ಲ ಇಲಾಖೆಗಳ ಅಧಿಕಾರಿ-ಸಿಬ್ಬಂದಿ, ಗಾರ್ಮೆಂಟ್ಸ್ ಕಾರ್ಮಿಕರು ಹಾಗೂ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸ್ತ್ರೀಶಕ್ತಿ ಸ್ವ-ಸಾಹಯ ಗುಂಪುಗಳ ಸದಸ್ಯರು, ಕನ್ನಡಪರ ಹೋರಾಟ ಸಂಘಗಳ ಸದಸ್ಯರು, ಗ್ರಾಮಗಳ ಗ್ರಾಮಸ್ಥರು ಸೇರಿದಂತೆ ಸುಮಾರು 15 ಸಾವಿರಕ್ಕೂ ಹೆಚ್ಚು ಜನ ಪರಸ್ಪರ ಕೈ ಕೈ ಹಿಡಿದು ಮಾನವ ಸರಪಳಿ ನಿರ್ಮಿಸಿ ಸಂವಿಧಾನದ ಪೀಠಿಕೆ ಓದುವ ಮೂಲಕ ಜಾತಿ, ಧರ್ಮ, ವರ್ಗ ಮೀರಿ ಏಕತೆ ಪ್ರದರ್ಶಿಸಿ ಕನ್ನಡ ನಾಡು, ನುಡಿ, ಸಂವಿಧಾನದ ಪರ ಜಯಘೋಷ ಕೂಗಿದರು.
ಸ್ಥಳದಲ್ಲಿ ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ, ತಾಪಂ ಇಒ ವೇಣು, ಬಿಇಒ ಆರ್.ಪಿ.ಮಹೇಶ್, ಪುರಸಭೆ ಮುಖ್ಯಾಧಿಕಾರಿ ಎಂ.ರಾಜಣ್ಣ ಹಾಜರಿದ್ದರು.
ಪೊಲೀಸ್ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದು, ಬಿಗಿ ಭದ್ರತೆ ಒದಗಿಸಿದರು.
ಸಮಸ್ಯೆಗೊಳಗಾದ ವಿದ್ಯಾರ್ಥಿಗಳು: ಪ್ರಜಾಪ್ರಭುತ್ವ ದಿನಾಚರಣೆ ಆಯೋಜನೆ ಕುರಿತು ತಾಲೂಕು ಆಡಳಿತ ಕ್ಷೇತ್ರದ ಶಾಸಕರ ನೇತೃತ್ವದಲ್ಲಿ ಮೂರ‌್ನಾಲ್ಕು ಬಾರಿ ಅಧಿಕಾರಿ ಹಾಗೂ ಸಾರ್ವಜನಿಕ ಸಭೆಗಳನ್ನು ಆಯೋಜಿಸಿ ಪೂರ್ವಸಿದ್ಧತೆ ಕೈಗೊಂಡರೂ ಉಂಟಾದ ಕೆಲ ಗೊಂದಲಗಳಿಂದ ವಿದ್ಯಾರ್ಥಿಗಳು ಹಸಿವಿನಿಂದ ಹೈರಾಣಾಗುವ ಪರಿಸ್ಥಿತಿ ನಿರ್ಮಾಣವಾಯಿತು.
ಇಲಾಖೆ ಸೂಚನೆಯಂತೆ ಶಿಕ್ಷಕರೊಂದಿಗೆ ಶಾಲಾ-ಕಾಲೇಜು ವಿದ್ಯಾರ್ಥಿಗಳು ಬೆಳಗಿನ ಉಪಾಹಾರ ಸೇವಿಸದೆ ಭಾನುವಾರ ಮುಂಜಾನೆಯೇ ಮಾನವ ಸರಪಳಿ ರಚಿಸುವ ಸಲುವಾಗಿ ಆಗಮಿಸಿದ್ದು, 10.30 ಕಳೆದರೂ ಕಾರ್ಯಕ್ರಮ ವಿಧಾನದ ಪೂರ್ವಾಪರ ತಿಳಿಯದೆ ಹಸಿವಿನಿಂದ ಅಲ್ಲಲ್ಲಿ ಇರಿಸಿದ್ದ ನೀರು ಕುಡಿದು ಹಸಿವು ತಣಿಸಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.
ಕಾರ್ಯಕ್ರಮಕ್ಕೆ ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳನ್ನು ಗೂಡ್ಸ್ ವಾಹನಗಳಲ್ಲಿ ಕರೆ ತರಬಾರದು ಎಂಬ ವಾದವನ್ನು ವಿವಿಧ ಸಂಘಟನೆಗಳು ಮೊದಲೇ ತಿಳಿಸಿ ಎಚ್ಚರಿಸಿದ್ದರೂ ದೊಡ್ಡಪಾಳ್ಯ ಗ್ರಾಮ ಸೇರಿದಂತೆ ಇನ್ನು ಮೂರು ಗ್ರಾಮಗಳ ವಿದ್ಯಾರ್ಥಿಗಳನ್ನು ಗೂಡ್ಸ್ ವಾಹನಗಳ ಮೂಲಕವೇ ರವಾನಿಸಲಾಯಿತು. ಪ್ರಮುಖವಾಗಿ ತಾಲೂಕು ಆಡಳಿತ ಭಾಗಶಃ ವಿದ್ಯಾರ್ಥಿಗಳಿಗೆ ಬೆಳಗಿನ ಉಪಾಹಾರ ಹಾಗೂ ಬಿಸ್ಕೆಟ್ ವ್ಯವಸ್ಥೆ ಮಾಡಿದ್ದರೂ ಕೊರತೆ ಎದುರಾದ ಹಿನ್ನೆಲೆಯಲ್ಲಿ ಸಾಕಷ್ಟು ಸಂಖ್ಯೆಯ ವಿದ್ಯಾರ್ಥಿಗಳಿಗೆ ಸಿಗದೆ ಹಸಿವಿನಿಂದ ಹೈರಾಣಾದ ಪರಿಸ್ಥಿತಿ ನಿರ್ಮಾಣವಾಯಿತು.
ಈ ಸಂಬಂಧ ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಪ್ರತಿಕ್ರಿಯಿಸಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ನಿಗದಿತ ಸ್ಥಳದಲ್ಲಿ ಬೆಳಗ್ಗೆಯೇ ಉಪಾಹಾರ ತಿನಿಸಿಕೊಂಡು ಕರೆತರುವಂತೆ ಶಿಕ್ಷಕರಿಗೆ ಸೂಚನೆ ನೀಡಲಾಗಿತ್ತು. ಜತೆಗೆ ನಿಮಿಷಾಂಬ ದೇಗುಲದಿಂದಲೂ ಉಪಾಹಾರ ವಿತರಣೆಗೆ ಎಲ್ಲ ಕ್ರಮ ಕೈಗೊಳ್ಳಲಾಗಿತ್ತು. ಆದರೆ ಕೆಲ ಗೊಂದಲಗಳಿಂದ ತಡವಾಗಿ, ಕುಡಿಯುವ ನೀರು ಜತೆಗೆ ಆಹಾರವನ್ನು ವಾಹನಗಳ ಮೂಲಕ ವಿದ್ಯಾರ್ಥಿಗಳು ಇರುವ ಸ್ಥಳಕ್ಕೆ ತೆರಳಿ ವಿತರಿಸುವ ಕೆಲಸ ಮಾಡಲಾಗಿದೆ. ಗೂಡ್ಸ್ ವಾಹನದಲ್ಲಿ ಕರೆತಂದ ಕುರಿತು ಪರಿಶೀಲಿಸಲಾಗುವುದು ಎಂದರು.