ಆಧುನಿಕತೆಯಲ್ಲೂ ಗ್ರಾಮೀಣ ಸೊಗಡು ಉಳಿಸಿಕೊಂಡ ಹುಳ್ಳೇನಹಳ್ಳಿ

WhatsApp Image 2025-10-19 at 5.18.29 PM
Published on

ಮಾಗಡಿಯಿಂದ 30 ಕಿ.ಮೀ ಅಂತರದಲ್ಲಿದೆ ಸುಂದರ ಗ್ರಾಮ

ದೇಶದ ಪ್ರತಿಯೊಂದು ಗ್ರಾಮಗಳಿಗೂ ತನ್ನದೆ ವೈಶಿಷ್ಟ್ಯ, ಇತಿಹಾಸ, ಪರಂಪರೆ ಇದ್ದು, ಅದರಂತೆ ತಾಲೂಕಿನ ಹುಳ್ಳೇನಹಳ್ಳಿ ಆಧುನಿಕ ಕಾಲದಲ್ಲೂ ಗ್ರಾಮೀಣ ಸೊಗಡು ಉಳಿಸಿಕೊಂಡಿದೆ.

ಮಾಗಡಿ ಪಟ್ಟಣದಿಂದ ಸುಮಾರು 30 ಕಿಮೀ ಅಂತರದಲ್ಲಿರುವ ಪುರಾತನ ಗ್ರಾಮ ಹುಳ್ಳೇನಹಳ್ಳಿಯಲ್ಲಿ ಸಾವಿರಕ್ಕೂ ಹೆಚ್ಚು ಜನರಿದ್ದು, ಸರ್ವಧರ್ಮದವರೂ ಸಹಬಾಳ್ವೆ ನಡೆಸುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಶಿಕರಿದ್ದು, ಕೆಲವರು ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಲ ವರ್ಷಗಳಿಂದ ಬಿರುಸಿನ ರಾಜಕೀಯ ಪೈಪೋಟಿ ತಾಣವಾಗಿಯೂ ಹುಳ್ಳೇನಹಳ್ಳಿ ಗುರುತಿಸಿಕೊಳ್ಳುತ್ತಿದೆ. ಜನರ ಅನುಕೂಲಕ್ಕಾಗಿ ಪ್ರಾಥಮಿಕ ಆಸ್ಪತ್ರೆ, ಪಶು ಆಸ್ಪತ್ರೆ, ಗ್ರಾಪಂ ಕಚೇರಿ, ವಿಎಸ್ಸೆಸ್ಸೆನ್​ ಹಾಗೂ ಸವೋರ್ದಯ ಪ್ರೌಢಶಾಲೆ ಗ್ರಾಮದಲ್ಲಿವೆ.

ಗ್ರಾಮದ ಇತಿಹಾಸ

ಹುಳ್ಳಯ್ಯ ಎಂಬುವರು ಗುಡಿಸಲು ನಿರ್ಮಾಣಮಾಡಿ, ಗ್ರಾಮಕ್ಕೆ ಮುಳ್ಳೇನಹಳ್ಳಿ ಎಂದು ಹೆಸರಿಟ್ಟರು. ಬಳಿಕ ಹುಳ್ಳಯ್ಯನ ಹಳ್ಳಿ ಎನ್ನಲಾಗುತ್ತಿತ್ತು. ಗುಡಿಸಲುಗಳು ಹೆಚ್ಚಾಗಿದ್ದ ಗ್ರಾಮ ಕಾಲಕ್ರಮೇಣ ಆಧುನಿಕತೆಗೆ ತಕ್ಕಂತೆ ಬದಲಾವಣೆಯಾಗಿ ಹುಳ್ಳಯ್ಯನಹಳ್ಳಿ ಮುಂದೆ ಹುಳ್ಳೇನಹಳ್ಳಿಯಾಗಿ ಬದಲಾವಣೆಗೊಂಡಿತ್ತಲ್ಲದೇ ಗ್ರಾಮವೂ ಅಭಿವೃದ್ಧಿ ಕಂಡಿತು ಎನ್ನುತ್ತಾರೆ ಗ್ರಾಮದ ಹಿರಿಕರು.

ಕೃಷಿಯೇ ಜೀವನಾಧಾರ

ಗ್ರಾಮದಲ್ಲಿ ಕೃಷಿಯನ್ನೇ ನಂಬಿಕೊಂಡು ಜೀವನ ನಡೆಸುವವರು ಹೆಚ್ಚು. ರಾಗಿ, ತೊಗರಿ, ಅವರೆಕಾಯಿ, ಅಲಸಂದೆ, ಅಡಕೆ ಪ್ರಮುಖ ಬೆಳೆಗಳು. ಕೃಷಿಯೊಂದಿಗೆ ಗ್ರಾಮದವರು ರಂಗಕಲೆಗೂ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದು, ರಾಮಾಯಣ, ಕುರುೇತ್ರ ನಾಟಕಗಳನ್ನು ಇಲ್ಲಿ ಆಡಿಸಿ, ಸಾಕಷ್ಟು ರಂಗಕಲಾವಿದರು ಮತ್ತು ಹರಿಕಥೆ ದಾಸರಿಗೂ ಗ್ರಾಮ ಸ್ಥಾನ ನೀಡಿದೆ. ಗ್ರಾಮದ ಕೆಲ ಯುವಕರು ವಾಲಿಬಾಲ್​, ಅಥ್ಲೆಟಿಕ್​ ಹಾಗೂ ಕ್ರಿಕೆಟ್​ನಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲೂ ಸ್ಪರ್ಧಿಸಿದ್ದಾರೆ.

ವಾರದಲ್ಲಿ ಎರಡು ದಿನ ಭಜನೆ

ಗ್ರಾಮದಲ್ಲಿ ಶ್ರೀರಾಮಚಂದ್ರನ ಭಜನಾ ಮನೆ ಇದ್ದು, ಹಿರಿಯರಾದ ಹುಳ್ಳೇನಹಳ್ಳಿ ಗಿರಿಯಣ್ಣ ಅವರ ಮಾರ್ಗದರ್ಶನದಲ್ಲಿ ವಾರದಲ್ಲಿ ಎರಡು ದಿನ ಭಜನೆ ನಡೆಯುತ್ತದೆ. ಹಿರಿಯರು ಹಾಮೋರ್ನಿಯಂ ನುಡಿಸಿ, ಯುವಕರಿಗೂ ಹೇಳಿಕೊಡುತ್ತಾರೆ.

ಸಾಹಿತ್ಯ, ಸಾಂಸತಿಕವಾಗಿ, ಹಳ್ಳಿಗಾಡಿನ ಸೊಗಡನ್ನು ಹುಳ್ಳೇನಹಳ್ಳಿ ಇಂದಿಗೂ ಉಳಿಸಿಕೊಂಡಿದೆ. ಗ್ರಾಮದಲ್ಲಿ ವಿವಿಧ ದೇವಾಲಯಗಳಿದ್ದು, ಧಾರ್ಮಿಕ ಕ್ಷೇತ್ರವಾಗಿ ಗ್ರಾಮವನ್ನು ಅಭಿವೃದ್ಧಿ ಪಡಿಸಬೇಕಿದೆ. | ಗಿರಿಯಪ್ಪ, ಹಿರಿಯ ಮುಖಂಡ

ದೇವಾಲಯಗಳ ತಾಣ ಹುಳ್ಳೇನಹಳ್ಳಿ ಗ್ರಾಮದಲ್ಲಿ ಪ್ರಮುಖವಾಗಿ ಆಂಜನೇಯ ಸ್ವಾಮಿ, ಬಸವಣ್ಣ, ಗ್ರಾಮ ದೇವತೆ, ಭೈರವೇಶ್ವರ, ವನಭೋಜನಮ್ಮ ತಾಯಿ ದೇವಾಲಯಗಳಿವೆ. ಅದರಲ್ಲೂ ಬಸವಣ್ಣ ದೇವಾಲಯ ವಿಶೇಷವಾಗಿದ್ದು, ಹೊಯ್ಸಳರು ಮತ್ತು ಚೋಳರ ಕಾಲದ್ದು ಎಂದು ಇತಿಹಾಸಕಾರು ಅಂದಾಜಿಸಿದ್ದಾರೆ. ಇಲ್ಲಿ ವೀರಗಲ್ಲು ಇದ್ದು, ದೇಗುಲವು ಇತ್ತೀಚೆಗೆ ಜೀಣೋರ್ದ್ಧಾರಗೊಂಡಿದೆ. ಹಾಗೆಯೇ ಬಸವನ ಕೆರೆ ಗ್ರಾಮದ ಸೌಂದರ್ಯ ಹೆಚ್ಚಿಸಿದೆ.

ತುಮಕೂರು ಸಂಪರ್ಕ ಹೆಚ್ಚು

ರಾಮನಗರಕ್ಕೆ ಹೋಲಿಕೆ ಮಾಡಿದರೆ ತುಮಕೂರು ನಗರ ಸಮೀಪವಿದ್ದು, ಕಚೇರಿ ಕೆಲಸಗಳಿಗೆ ಮಾತ್ರ ಮಾಗಡಿ, ರಾಮನಗರಕ್ಕೆ ಹೋಗುತ್ತಾರೆ, ಉಳಿದ ಸಂತೆ, ವ್ಯಾಪಾರ ಸೇರಿ ಬಹುತೇಕ ಕೆಲಸಕಾರ್ಯಗಳಿಗೆ ತುಮಕೂರಿನೊಂದಿಗೆ ಸಂಪರ್ಕ ಹೆಚ್ಚು.

-ಎಂ.ಎಸ್​.ಸಿದ್ದಲಿಂಗೇಶ್ವರ ಮಾಗಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net