

ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಬಿರುಸಿನ ಮಳೆಗೆ ಎಣ್ಮಕಜೆ ಪಂಚಾಯಿತಿ ಪೆರ್ಲ ಪೂವನಡ್ಕ ರಸ್ತೆ ಶಿಥಿಲಗೊಳ್ಳುತ್ತಿದ್ದರೂ ಲೋಕೋಪಯೋಗಿ ಇಲಾಖೆ ಮೌನ ಪಾಲಿಸಿದೆ.
ಲೋಕೋಪಯೋಗಿ ಇಲಾಖೆ ಬದಿಯಡ್ಕ ವಿಭಾಗದ ಅಧೀನದಲ್ಲಿರುವ ಪ್ರಸಕ್ತ ರಸ್ತೆ ಪೆರ್ಲ ಸನಿಹದ ಆಯುರ್ವೇದ ಆಸ್ಪತ್ರೆ ವಠಾರದಲ್ಲಿ 25 ಲಕ್ಷ ರೂ. ಹೆಚ್ಚು ಮೊತ್ತ ಬಳಸಿ ಕಿರು ಸೇತುವೆ ಹಾಗೂ ಒಳಚರಂಡಿ ನಿರ್ಮಿಸಿದ್ದರೂ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿದೆ. ಇನ್ನು ರಸ್ತೆಗೆ ಅಳವಡಿಸಿದ್ದ ಕಾಂಕ್ರೀಟ್ ಎದ್ದು ಸ್ಲ್ಯಾಬ್‌ನ ಕಬ್ಬಿಣ ಕಿತ್ತು ಬಂದಿದೆ.
ಎತ್ತರ ಪ್ರದೇಶದಿಂದ ಭಾರಿ ಪ್ರಮಾಣದಲ್ಲಿ ಮಳೆನೀರು ಬರುತ್ತಿದ್ದು, ಇದನ್ನು ಚರಂಡಿಗೆ ಅಳವಡಿಸುವಲ್ಲಿ ಇಲಾಖೆ ಸಂಪೂರ್ಣ ವಿಫಲವಾಗಿದೆ. ಇದರಿಂದ ಮಳೆನೀರು ಸಂಪೂರ್ಣ ರಸ್ತೆಯಲ್ಲೇ ಹರಿದು ರಸ್ತೆ ಶಿಥಿಲಗೊಳ್ಳಲು ಕಾರಣವಾಗುತ್ತಿದೆ. ಆಯುರ್ವೇದ ಆಸ್ಪತ್ರೆ ಬಳಿಯಿಂದ ಬಜಕೂಡ್ಲು ದೇವಸ್ಥಾನ ರಸ್ತೆಗೆ ತಿರುಗುವ ರಸ್ತೆ ಬಳಿ ರಸ್ತೆ ಹೊಂಡಬಿದ್ದು, ವಾಹನ ಚಾಲಕರ ಪಾಲಿಗೆ ನಿರಂತರ ಸಮಸ್ಯೆ ತಂದೊಡ್ಡುತ್ತಿದೆ. ದ್ವಿಚಕ್ರ ಸವಾರರು ಹಾಗೂ ಆಟೋಚಾಲಕರು ಈ ಪ್ರದೇಶದಲ್ಲಿ ಹೆಚ್ಚಿನ ಸಮಸ್ಯೆ ಎದುರಿಸುತ್ತಿದ್ದಾರೆ. ಲಕ್ಷಾಂತರ ರೂ. ವೆಚ್ಚದಲ್ಲಿ ಕಾಮಗಾರಿ ನಡೆಸಿರುವ ಪ್ರದೇಶದಲ್ಲಿ ಒಂದೆರಡು ವರ್ಷದೊಳಗೇ ರಸ್ತೆ ಮತ್ತೆ ಶಿಥಿಲಗೊಳ್ಳುವಲ್ಲಿ ಗುತ್ತಿಗೆದಾರರ ಕಳಪೆ ಕಾಮಗಾರಿ ಕಾರಣವೆಂದು ಸ್ಥಳೀಯರು ಆರೋಪಿಸಿದ್ದಾರೆ.
ಸ್ಪಷ್ಟ ಸಂದೇಶ ನೀಡುವಲ್ಲೂ ವಿಫಲ
ರಸ್ತೆ ಅಂಚಿಗೆ ಕುಡಿಯುವ ನೀರಿನ ಪೈಪ್ ಅಳವಡಿಸಲು ಅಗೆಯಲಾದ ಹೊಂಡದಲ್ಲಿ ಮಳೆನೀರು ಇಂಗಿ ಒಂದೆಡೆ ಹೊಂಡ ಉಂಟಾಗಿ ರಸ್ತೆ ಶಿಥಿಲವಾಗುತ್ತಿದೆ. ಜಲಮಂಡಳಿ ಮತ್ತು ಲೋಕೋಪಯೋಗಿ ಇಲಾಖೆ ನಡುವಿನ ಹೊಂದಾಣಿಕೆ ಕೊರತೆಯಿಂದ ಪೈಪ್‌ಲೈನ್ ಅಳವಡಿಕೆಗಾಗಿ ತೋಡುತ್ತಿರುವ ಹೊಂಡ ಸಮರ್ಪಕವಾಗಿ ಮುಚ್ಚದೆ ರಸ್ತೆ ಶಿಥಿಲಗೊಳ್ಳಲು ಕಾರಣವಾಗುತ್ತಿದೆ. ಲೋಕೋಪಯೋಗಿ ಇಲಾಖೆ ಈ ಬಗ್ಗೆ ಜಲಮಂಡಳಿಗೆ ಸ್ಪಷ್ಟ ಸಂದೇಶ ನೀಡುವಲ್ಲೂ ವಿಫಲವಾಗುತ್ತಿದೆ. ಜಿಲ್ಲೆಯ ಬಹುತೇಕ ರಸ್ತೆಗಳು ಜಲಮಂಡಳಿ, ದೂರವಾಣಿ ಸೇರಿದಂತೆ ವಿವಿಧ ಅಗತ್ಯಗಳಿಗಾಗಿ ತೋಡುತ್ತಿರುವ ಹೊಂಡಗಳಿಂದ ಹೆಚ್ಚು ಶಿಥಿಲಗೊಳ್ಳುತ್ತಿದೆ.
ಪೆರ್ಲ - ಪೂವನಡ್ಕ ರಸ್ತೆಯ ಆಯುರ್ವೇದ ಆಸ್ಪತ್ರೆ ವಠಾರದಲ್ಲಿ ದೊಡ್ಡ ಹೊಂಡಗಳನ್ನು ತಾತ್ಕಾಲಿಕವಾಗಿ ಮುಚ್ಚುವ ಕೆಲಸ ನಿರ್ವಹಿಸಿದ್ದರೂ, ಬಿರುಸಿನ ಮಳೆಗೆ ಮತ್ತೆ ಕಿತ್ತುಹೋಗಿದೆ. ಮಳೆ ದೂರಾದ ನಂತರ ಇಲ್ಲಿ ಶಾಶ್ವತವಾಗಿ ಹೊಂಡಗಳನ್ನು ಮುಚ್ಚುವ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಕೆ.ಮಗೇಶ್, ಸಹಾಯಕ ಇಂಜಿನಿಯರ್, ಪಿಡಬ್ಲ್ಯುಡಿ ಬದಿಯಡ್ಕ ವಿಭಾಗ