

ಕಾರ್ಕಳ: ತಾಲೂಕಿನಾದ್ಯಂತ ಕಳೆದೊಂದು ವಾರದಿಂದ ನಿರಂತರ ಸುರಿಯುತ್ತಿರುವ ಮಳೆ ಭಾನುವಾರವೂ ಬಿಡದೆ ಸುರಿಯುತ್ತಿದ್ದು ಹಲವು ಕಡೆಗಳಲ್ಲಿ ಕೃತಕ ನೆರೆ ನೀರಿನಿಂದ ಸಮಸ್ಯೆಗಳಾಗಿದ್ದು, ಇನ್ನೂ ಹಲವು ಭಾಗದಲ್ಲಿ ಗಾಳಿ-ಮಳೆಗೆ ಅಪಾರ ಹಾನಿಯುಂಟಾಗಿದೆ.
ಕಾರ್ಕಳ ಬಂಡಿಮಠದ ನಿವಾಸಿ ಸುಜಾತ ಶೆಟ್ಟಿ ಎಂಬುವರ ಮನೆಯ ಮೇಲ್ಛಾವಣಿ ಹಾನಿಗೊಂಡು 50 ಸಾವಿರ ರೂ. ನಷ್ಟ ಉಂಟಾಗಿದೆ. ತಾಲೂಕಿನ ಮಿಯ್ಯಾರು ಗ್ರಾಮದ ಸೂರಲ್ ದರಿಕೆರೆ ನಿವಾಸಿ ದೇವಕಿ ಮೊಯ್ಲಿ ಎಂಬುವರ ಮನೆಗೆ ಮರ ಬಿದ್ದು 20 ಸಾವಿರ ರೂ. ನಷ್ಟ ಸಂಭವಿಸಿದೆ. ಮಿಯ್ಯಾರು ಗ್ರಾಮದ ತಿಮ್ಮಗುಡ್ಡೆ ಬೇಬಿ ಸಂಜೀವ ಎಂಬುವರ ಮನೆಗೆ ಹಾನಿಯಾಗಿದ್ದು, 10 ಸಾವಿರ ರೂ. ನಷ್ಟವಾಗಿದೆ. ಹಿರ್ಗಾನ ಗ್ರಾಮದ ಲಕ್ಷೀಪುರ ನೆಲ್ಲಿಕಟ್ಟೆ ನಿವಾಸಿ ಅಶೋಕ್ ಕುವಾರ್ ಮನೆಗೆ ವಿದ್ಯತ್ ಕಂಬ ಬಿದ್ದು ಹಾನಿಯಾಗಿದೆ.
ವಾಳ ಗ್ರಾಮದ ಎಡಪಾಡಿ ಪ್ರದೇಶದಲ್ಲಿ ಗುಡ್ಡ ಕುಸಿತ ಉಂಟಾಗಿದ್ದು ಗುಡ್ಡದ ಮೇಲ್ಭಾಗದಲ್ಲಿ ಹಾದು ಹೋದ ರಸ್ತೆಯು ಅಪಾಯದಲ್ಲಿದೆ. ನ ವಾಹನಗಳ ಪ್ರವೇಶ ನಿರ್ಬಂಧಿಸಲಾಗಿದ್ದು, ಬ್ಯಾರಿಕೇಡ್ ಅಳವಡಿಸಲಾಗಿದೆ. ಇನ್ನಾ ಗ್ರಾಮದ ಪ್ರೇವಾ ದೇವಾಡಿಗ ಎಂಬುವರ ಮನೆಗೆ ಮರ ಬಿದ್ದು 50 ಸಾವಿರ ರೂ. ನಷ್ಟವಾಗಿದೆ.
ಮುಡಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಯಾಣಪುರ ಮುಡಾರು ರಾಜ್ಯ ಹೆದ್ದಾರಿ ನಡುವಿನ ರಾಮೆರಾಗುತ್ತು ಬಳಿ ನೂತನ ಸೇತುವೆ ನಿರ್ವಾಣವಾಗುತಿದ್ದು, ನಿರೀನ ಮಟ್ಟ ಹೆಚ್ಚಿರುವುದರಿಂದ ಬದಲಿ ರಸ್ತೆಯನ್ನು ಸಾರ್ವಜನಿಕರ ಸುರಕ್ಷಾ ದೃಷ್ಟಿಯಿಂದ ರಸ್ತೆಯ ಎರಡು ಬದಿ ಮುಚ್ಚಲಾಗಿದೆ. ಹೀಗಾಗಿ ಈ ಭಾಗದಲ್ಲಿ ಗ್ರಾಮಸ್ಥರ ಸಂಚಾರ ನಿರ್ಬಂಧಿಸಲಾಗಿದೆ. ಕೆರ್ವಾಶೆಯಿಂದ ಬಜಗೋಳಿ ಕಡೆಗೆ ತೆರಳುವವರು ಮತ್ತು ಬಜಗೋಳಿಯಿಂದ ಕೆರ್ವಾಶೆ ಕಡೆಗೆ ತೆರಳುವವರು ಹಡ್ಯಾಲು ಕ್ರಾಸ್ ಮೂಲಕ ತೆರಳುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.