ಅ.30ರಂದು ಬೃಹತ್ ಉದ್ಯೋಗ ಮೇಳ

ಅ.30ರಂದು ಬೃಹತ್ ಉದ್ಯೋಗ ಮೇಳ
Published on

ಹಾಸನ: ನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬೃಹತ್ ಉದ್ಯೋಗ ಮೇಳವನ್ನು ಅ.30 ರಂದು ಆಯೋಜನೆ ಮಾಡಲು ಅಗತ್ಯ ಕ್ರಮಕೈಗೊಳ್ಳುವಂತೆ ಸಂಸದ ಶ್ರೇಯಸ್ ಎಂ.ಪಟೇಲ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಅಧಿಕಾರಿಗಳೊಂದಿಗೆ ಉದ್ಯೋಗ ಮೇಳ ಪೂರ್ವ ಸಿದ್ಧತಾ ಸಭೆ ನಡೆಸಿ ಮಾತನಾಡಿದ ಅವರು, ಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಜನತೆ ಭಾಗವಹಿಸಬೇಕು. ಈ ನಿಟ್ಟಿನಲ್ಲಿ ಗ್ರಾಮೀಣ ಮಟ್ಟದಲ್ಲೂ ಪ್ರಚಾರ ನಡೆಸಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಉದ್ಯೋಗ ಮೇಳದ ಕುರಿತು ಎಲ್ಲೆಡೆ ಮಾಹಿತಿಗಾಗಿ ಪೋಸ್ಟರ್ ಅಳವಡಿಸಲು ಅಗತ್ಯ ಕ್ರಮಕೈಗೊಳ್ಳಬೇಕು. ಮೇಳದಲ್ಲಿ ಭಾಗವಹಿಸಲು ನೋಂದಣಿ ಮಾಡಿಕೊಳ್ಳುವಂತೆ ಅರಿವು ಮೂಡಿಸಿ ಎಂದು ತಿಳಿಸಿದರು.

ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ ಡಿಪ್ಲೊಮಾ, ಪದವಿ ಮಾಡಿರುವವರಿಗೂ ಉದ್ಯೋಗ ಕಲ್ಪಿಸಲು ಹೆಚ್ಚಿನ ಕಂಪನಿಗಳನ್ನು ಆಹ್ವಾನಿಸುವಂತೆ ಉದ್ಯೋಗಾಧಿಕಾರಿಗಳಿಗೆ ಸೂಚಿಸಿದರು. ತಾಲೂಕು ಮಟ್ಟದಲ್ಲಿಯೂ ತಹಸೀಲ್ದಾರ್ ಹಾಗೂ ಕಾರ್ಯನಿರ್ವಹಣಾಧಿಕಾರಿ ಸಭೆ ನಡೆಸಿ ಸ್ಥಳೀಯವಾಗಿ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಲು ಕ್ರಮ ವಹಿಸಬೇಕು ಎಂದರು.

ಜಿಲ್ಲಾಧಿಕಾರಿ ಕೆ.ಎಸ್ ಲತಾಕುಮಾರಿ ಮಾತನಾಡಿ, ಹಾಸನ ಕೃಷಿ ಪ್ರಧಾನವಾದ ಜಿಲ್ಲೆಯಾಗಿರುವುದರಿಂದ ಕೃಷಿಗೆ ಒತ್ತು ನೀಡುವ ಕಂಪನಿಗಳನ್ನು ಉದ್ಯೋಗ ಮೇಳಕ್ಕೆ ಆಹ್ವಾನಿಸಬೇಕು ಎಂದು ತಿಳಿಸಿದರು.

ಈ ವೇಳೆ ಇಂಡಿಯಾ ಸ್ಕಿಲ್ಸ್-2025ರ ಕುರಿತಾದ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಸಭೆಯಲ್ಲಿ ಜಿಲ್ಲಾ ಉದ್ಯೋಗಾಧಿಕಾರಿ ವಿಜಯಲಕ್ಷ್ಮೀ ಹಾಗೂ ವಿವಿಧ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net