ಪ್ರೇಮಿಗಳ ದಿನಕ್ಕೂ ಮುನ್ನವೇ ಕೆಂಗುಲಾಬಿಗೆ ಭಾರಿ ಬೇಡಿಕೆ: ವಿದೇಶಕ್ಕೆ ಕೋಟಿ ಗುಲಾಬಿ ರಫ್ತು

Red Rose
Published on

| ಪಂಕಜ ಕೆ.ಎಂ. ಬೆಂಗಳೂರು

ಪ್ರೇಮಿಗಳ ದಿನ (ಫೆ.14) ಸಮೀಪಿಸುತ್ತಲೇ ಎಲ್ಲೆಡೆ ಕೆಂಪು ಗುಲಾಬಿಯದ್ದೇ ರಂಗು. ಬೆಂಗಳೂರು ಸೇರಿ ದೇಶದ ವಿವಿಧ ನಗರಗಳಿಂದ ವಾರಕ್ಕೂ ಮುನ್ನವೇ ಕೆಂಗುಲಾಬಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದ್ದು, ರಾಜ್ಯದಿಂದ ಈ ಬಾರಿ 1 ಕೋಟಿ ಗುಲಾಬಿ ಹೂಗಳು ವಿದೇಶಗಳಿಗೆ ರಫ್ತಾಗಲಿವೆ.

ಆಸ್ಟ್ರೇಲಿಯಾ, ನ್ಯೂಜಿಲೆಂಡ್, ದುಬೈ, ಸಿಂಗಾಪುರ, ಜಪಾನ್, ಮಲೇಶಿಯಾ, ರಷ್ಯಾ ಸೇರಿ ವಿವಿಧ ದೇಶಗಳಿಂದ ಗುಲಾಬಿಗೆ ಹೆಚ್ಚಿನ ಬೇಡಿಕೆ ಇದ್ದು, ಕಳೆದ ವರ್ಷದಂತೆ ಈ ಬಾರಿಯೂ ಕೋಟಿಗೂ ಅಧಿಕ ಹೂವುಗಳು ರವಾನೆಯಾಗಲಿವೆ. ಇದರೊಂದಿಗೆ ಉತ್ತಮ ವಿದೇಶಿ ವಿನಿಮಯ ಹೊಂದುವ ನಿರೀಕ್ಷೆಯಲ್ಲಿರುವುದಾಗಿ ಹೆಬ್ಬಾಳದ ಅಂತಾರಾಷ್ಟ್ರೀಯ ಪುಷ್ಪ ಹರಾಜು ಕೇಂದ್ರದ (ಐಫ್ಯಾಬ್) ವ್ಯವಸ್ಥಾಪಕ ನಿರ್ದೇಶಕ ವಿಶ್ವನಾಥ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ರಾಜ್ಯದಲ್ಲಿ ಈ ಬಾರಿ ಬರದ ನಡುವೆಯೂ ಹೂವಿನ ಇಳುವರಿಯಲ್ಲಿ ಸಮಸ್ಯೆಯಾಗಿಲ್ಲ. ಆದರೆ ನಿರೀಕ್ಷಿತ ಬೆಲೆ ಸಿಕ್ಕಿಲ್ಲ. ಆದಾಗ್ಯೂ ದೊಡ್ಡಬಳ್ಳಾಪುರ, ಆನೇಕಲ್, ಚಿಕ್ಕಬಳ್ಳಾಪುರ ಸೇರಿ ಬೆಂಗಳೂರು ಸುತ್ತಮುತ್ತಲ ಭಾಗಗಳಿಂದ ವಿವಿಧ ತಳಿಯ ಹೂವುಗಳು ಪೂರೈಕೆಯಾಗುತ್ತಿದ್ದು, ಪ್ರೇಮಿಗಳ ದಿನಕ್ಕೆ ಬೇಡಿಕೆಗೆ ಅನುಗುಣವಾಗಿ ಹೂವು ಲಭ್ಯವಾಗಲಿವೆ ಎಂದು ಹೇಳಿದರು.

ಕೇಕ್ /ಚಾಕೊಲೇಟ್​ಗಳ ಆಕರ್ಷಣೆ

ಪ್ರೇಮಿಗಳ ದಿನಕ್ಕೆ ನಗರದ ಹಲವು ಕೇಕ್ ಹಾಗೂ ಚಾಕೊಲೇಟ್ ಮಳಿಗೆಗಳು ಪ್ರೇಮಿಗಳ ದಿನಕ್ಕೆ ಹೃದಯದ ಆಕಾರದ ಕೇಕ್ ಹಾಗೂ ಚಾಕೊಲೇಟ್​ಗಳ ತಯಾರಿಯಲ್ಲಿ ತೊಡಗಿಕೊಂಡಿವೆ. ಬಹಳಷ್ಟು ಮಂದಿ ಪ್ರೇಮ ನಿವೇದನೆಗಾಗಿ ಹೃದಯಾಕಾರದ ಕೇಕ್​ಗಳಿಗೆ ಈಗಾಗಲೇ ಬುಕಿಂಗ್ ಮಾಡುತ್ತಿದ್ದಾರೆ. ನಗರದ ಮಾಲ್​ಗಳು ಹಾಗೂ ಕೆಲ ಹೋಟೆಲ್​ಗಳೂ ಪ್ರೇಮಿಗಳ ದಿನಕ್ಕೆ ಸಭಾಂಗಣಗಳು ಸಿಂಗಾರಗೊಳ್ಳತೊಡಗಿವೆ.

8-9 ಲಕ್ಷ ಹೂಗಳ ಮಾರಾಟ

ಕೇಂದ್ರದಲ್ಲಿ ಈ ಹಿಂದೆ ಸಾಮಾನ್ಯ ದಿನಗಳಲ್ಲಿ 4 ಲಕ್ಷ ಹೂವು ಮಾರಾಟವಾಗುತ್ತಿತ್ತು. ಈಗ 5-6 ಲಕ್ಷಕ್ಕೆ ಏರಿಕೆಯಾಗಿದೆ. ನಮ್ಮಲ್ಲಿ ಕೆಂಪು, ಬಿಳಿ, ಹಳದಿ, ನಸುಗೆಂಪು ಸೇರಿ ವಿವಿಧ ಬಣ್ಣದ ಗುಲಾಬಿ ಲಭ್ಯವಿದ್ದು, ಫೆಬ್ರವರಿಯಲ್ಲಿ ಕೆಂಗುಲಾಬಿಗೆ ಬೇಡಿಕೆ ಹೆಚ್ಚು. ಕಳೆದ ವರ್ಷ ಪ್ರೇಮಿಗಳ ದಿನದಂದು 7 ಲಕ್ಷಕ್ಕೂ ಅಧಿಕ ಕೆಂಗುಲಾಬಿ ಹೂವು ಮಾರಾಟವಾಗಿತ್ತು. ಈ ಬಾರಿ 8-9 ಲಕ್ಷ ಮಾರಾಟವಾಗುವ ನಿರೀಕ್ಷೆ ಇದೆ. ಸದ್ಯ ಒಂದು ಗುಲಾಬಿ ಹೂವು 10-15 ರೂ.ಗೆ ಮಾರಾಟವಾಗುತ್ತಿದ್ದು, ಪ್ರೇಮಿಗಳ ದಿನದಂದು 18-20 ರೂ. ಏರಿಕೆಯಾಗುವ ಸಾಧ್ಯತೆ ಇದೆ ಎಂದರು.

ಆಕರ್ಷಕ ಗಿಫ್ಟ್​ಗಳು

ಸುಂದರವಾದ ಕಾಣಿಕೆ ನೀಡುವ ಮೂಲಕ ಪ್ರೀತಿ ಪಾತ್ರರನ್ನು ಮೆಚ್ಚಿಸಲು ಯೋಚಿಸುತ್ತಿರುವ ಯುವ ಮನಸ್ಸುಗಳನ್ನು ಸೆಳೆಯಲು ಮಾರಾಟ ಮಳಿಗೆಗಳಲ್ಲಿ ಪ್ರೇಮಿಗಳ ವಿಶೇಷವಾಗಿ ಕೆಂಪು ಹಾಗೂ ಗುಲಾಬಿ ಬಣ್ಣಗಳಿಂದ ತಯಾರಿಸಿರುವ ಆಕರ್ಷಕ ಗಿಫ್ಟ್​ಗಳು, ಟೆಡ್ಡಿಬೇರ್​ಗಳು, ಕೀಬಂಚ್ ಇತ್ಯಾದಿ ವಿನ್ಯಾಸಗಳು ಕಂಗೊಳಿಸುತ್ತಿವೆ.

ಹೂವುಗಳ ಲಭ್ಯತೆ

ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಸುಮಾರು 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಪುಷ್ಪಕೃಷಿ ನಡೆಸಲಾಗುತ್ತಿದ್ದು, ವಾರ್ಷಿಕ ಕೋಟ್ಯಂತರ ರೂಪಾಯಿ ವಹಿವಾಟು ನಡೆಯುತ್ತಿದೆ. ಸಗಟು ದರದಲ್ಲಿ ಖರೀದಿಸಲು ಹೆಬ್ಬಾಳ ಬಳಿಯ ಅಂತಾರಾಷ್ಟ್ರೀಯ ಪುಷ್ಪ ಹರಾಜು ಕೇಂದ್ರಕ್ಕೆ ಭೇಟಿ ನೀಡಬಹುದು. ಇಲ್ಲಿ ಗುಣಮಟ್ಟದ ವಿವಿಧ ಬಗೆಯ ಹಾಗೂ ಬಣ್ಣಗಳ ಹೂಗಳು ಲಭ್ಯವಿವೆ. ಕೆ.ಆರ್. ಮಾರುಕಟ್ಟೆ, ಮಲ್ಲೇಶ್ವರ, ಯಶವಂತಪುರ, ದಾಸರಹಳ್ಳಿ, ಮಡಿವಾಳ, ಗಾಂಧಿಬಜಾರ್ ಸೇರಿ ವಿವಿಧ ಮಾರುಕಟ್ಟೆಗಳಲ್ಲಿ ಸಗಟು ದರದಲ್ಲಿ ಹೂವುಗಳ ಮಾರಾಟ ನಡೆಯುತ್ತದೆ. 14ರವರೆಗೆ ಚಿಲ್ಲರೆ ಮಾರಾಟಗಾರರ ಬಳಿ ಹೂಗಳಿಗೆ ಹೆಚ್ಚು ಬೇಡಿಕೆ ಮತ್ತು ದರ ಇರಲಿದೆ.

ವ್ಯಾಲೆಂಟೈನ್ಸ್ ಸಪ್ತಾಹ

ಹಿಂದೆಲ್ಲ ಮದುವೆ ಕಾರ್ಯಕ್ರಮ ಏಳು ದಿನಗಳ ಕಾಲ ನಡೆಯುತ್ತಿತ್ತು ಎಂದು ಹೇಳಲಾಗುತ್ತದೆ. ಆದರೆ ಈಗ ಪ್ರೇಮಿಗಳ ದಿನವನ್ನು ವ್ಯಾಲೆಂಟೈನ್ಸ್ ವೀಕ್ ಎಂದು ಏಳು ದಿನಗಳ ಕಾಲ ಆಚರಿಸಲಾಗುತ್ತದೆ. ಫೆ. 7ರಂದು ಗುಲಾಬಿ ದಿನದಿಂದ ಪ್ರಾರಂಭವಾಗಿ, ನಂತರ ಪ್ರಪೋಸ್ ಡೇ, ಚಾಕೊಲೇಟ್ ಡೇ, ಟೆಡ್ಡಿ ಡೇ, ಪ್ರಾಮಿಸ್ ಡೇ, ಹಗ್ ಡೇ ಮತ್ತು ಅಂತಿಮವಾಗಿ ಫೆ. 14ರಂದು ವ್ಯಾಲೆಂಟೈನ್ಸ್ ಡೇವರೆಗೂ ಈ ವ್ಯಾಲೆಂಟೈನ್ಸ್ ವೀಕ್ ಆಚರಿಸಲಾಗುತ್ತದೆ. ತಮ್ಮ ಪ್ರೇಮಿಗಳ ಮನಸ್ಸನ್ನು ಅರಿಯಲು ವಿವಿಧ ರೀತಿಯಲ್ಲಿ ಹೃದಯದ ಭಾವನೆಗಳನ್ನು ವ್ಯಕ್ತಪಡಿಸಲು ಹೀಗೆ ಹಲವು ಮಾರ್ಗಗಳನ್ನು ಕಂಡುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net