ಹೂವಿಗೆ ಭರ್ಜರಿ ಡಿಮಾಂಡ್: ಮಲ್ಲಿಗೆ ದರ ಮತ್ತೆ ಯತಾಸ್ಥಿತಿ

flower
ಮಾರಟಕ್ಕೆ ಇಟ್ಟಿರುವ ಹೂವು
Published on

ಹರಿಪ್ರಸಾದ್ ನಂದಳಿಕೆ ಕಾರ್ಕಳ

ತುಳುನಾಡು ಸೇರಿದಂತೆ ಕರಾವಳಿಯಲ್ಲಿ ನಾಗರಪಂಚಮಿ ಹಿನ್ನೆಲೆಯಲ್ಲಿ ಮಾರುಕಟ್ಟೆಗಳಲ್ಲಿ ಹೂವಿಗೆ ಬೇಡಿಕೆ ಹೆಚ್ಚಾಗಿದೆ. ಗುರುವಾರ ಹೂವು ಖರೀದಿಸಲು ಬಂದ ಗ್ರಾಹಕರಿಕೆ ಹೂವಿನ ಬೆಲೆ ಗಗನಕ್ಕೇರಿರುವುದು ಕಂಡು ಅಚ್ಚರಿಯಾಗಿದೆ.

ನಾಗದೇವರಿಗೆ ಅರ್ಪಿಸಲು ಹೂವು ಖರೀದಿಸಲು ಜನ ಮುಂದಾಗಿದ್ದರೂ ಬೆಲೆ ಏರಿಕೆ ಕಂಡು ಸ್ವಲ್ಪ ಪ್ರಮಾಣದ ಹೂವು ಪಡೆದು ವಾಪಸ್ಸಾಗುತ್ತಿದ್ದಾರೆ. ಅವಿಭಜಿತ ದ.ಕ ಹಾಗೂ ಉಡುಪಿ ಜಿಲ್ಲೆಯಲ್ಲಿ ಮಲ್ಲಿಗೆ ಹೂವು ಬೆಳೆಯುವುದು ಬಿಟ್ಟರೆ, ಬಾಕಿ ಉಳಿದ ಸೇವಂತಿಗೆ, ಕಾಕಡ, ಗೊಂಡೆ ಸಹಿತ ಇತರ ಹೂವು ಬರುವುದು ಹೊರಜಿಲ್ಲೆಗಳಿಂದ. ಆದರೆ ಅಲ್ಲಿಂದ ಬರುವ ಹೂವುಗಳ ಪ್ರಮಾಣ ಕಡಿಮೆಯಾಗಿದ್ದು, ಭರ್ಜರಿ ಬೇಡಿಕೆಯಿದೆ.

ಉಡುಪಿ, ಮಂಗಳೂರು ಭಾಗದ ಮಾರುಕಟ್ಟೆಗಳಲ್ಲಿ ಮಾರು ಲೆಕ್ಕದಲ್ಲಿ ಹೂವು ಮಾರಾಟವಾದರೆ, ಗ್ರಾಮೀಣ ಭಾಗದಲ್ಲಿ ಸೇವೆಂತಿಗೆ, ಕಾಕಡ ಇತರ ಹೂವಿಗೆ ಮೊಳವೊಂದಕ್ಕೆ 50-70 ರೂ.ವರೆಗೆ ಮಾರಾಟವಾಗಿದೆ. ಸೇವಂತಿಗೆ ಕುಚ್ಚಿಯೊಂದಕ್ಕೆ 1500-2000 ರೂ.ಗೆ ಮಾರಾಟವಾಗಿದ್ದು, ಮಾರುವೊಂದಕ್ಕೆ 200ರಿಂದ 250 ರೂ.ಗೆ ಮಾರಾಟವಾಗಿದೆ. ಕಾಕಡ ಹೂವು ಮೊಳವೊಂದಕ್ಕೆ 900ರಿಂದ 1300 ರೂ.ವರೆಗೆ ಮಾರಾಟವಾಗಿದೆ. ನಾಗರಪಂಚಮಿ ಸಂದರ್ಭ ವಿಶೇಷವಾಗಿ ಹೆಚ್ಚಾಗಿ ಮಾರಾಟವಾಗುವ ಹಿಂಗಾರ ಒಂದು ಹಾಳೆ 200ರಿಂದ 300 ರೂ.ವರೆಗೆ ಗುರುವಾರ ಮಾರಾಟವಾಗಿದೆ. ಅಲ್ಲದೆ ಕೇದಗೆ ಕಟ್ಟೊಂದಕ್ಕೆ 250ರಿಂದ 400ರವರೆಗೆ ಮಾರಾಟವಾಗಿದೆ.

ನಿರೀಕ್ಷಿತ ಇಳುವರಿಯಿಲ್ಲ

ಈ ಬಾರಿ ಮಳೆ ಪ್ರಮಾಣ ಹೆಚ್ಚಾಗಿದ್ದು, ಬಿಸಿಲು ಸರಿಯಾಗಿ ಗಿಡಗಳಿಗೆ ಬೀಳದ ಪರಿಣಾಮ ನಿರೀಕ್ಷಿತ ಹೂವಿನ ಇಳುವರಿ ರೈತರಿಗೆ ಸಿಗದೆ ದರದಲ್ಲಿ ಹೆಚ್ಚಳವಾಗಿದೆ. ಹೊರ ಜಿಲ್ಲೆಯಿಂದ ಹೂವುಗಳು ನಿರೀಕ್ಷೆಯಷ್ಟು ಇಳುವರಿ ಸಿಗದೆ ಮಾರುಕಟ್ಟೆಗಳಿಗೆ ಬೇಡಿಕೆಯಷ್ಟು ಪೂರೈಕೆ ಕಷ್ಟವಾಗಿದೆ. ಹೊರ ಜಿಲ್ಲೆಯ ಹೂವಿನ ಜತೆಯಲ್ಲಿ ನಾಡಿನ ಪ್ರಸಿದ್ಧ ಹೂವುಗಳಲ್ಲಿ ಒಂದಾದ ಮಲ್ಲಿಗೆ ಹೂವಿನ ಬೆಲೆಯೂ ಗಗನಕ್ಕೆ ಏರಿದೆ. ಆದರೂ ಬೇಡಿಕೆಯಷ್ಟು ಮಲ್ಲಿಗೆ ಹೂವು ಸಿಗುತ್ತಿಲ್ಲ.

ಸೀಯಾಳಕ್ಕೂ ದರ ಹೆಚ್ಚಳ

ಸಾಮಾನ್ಯವಾಗಿ ಬೇರೆ ದಿನಗಳಲ್ಲಿ 45-50ರೂ.ಗೆ ಮಾರಾಟವಾಗುತ್ತಿದ್ದ ಸಿಯಾಳ ನಾಗರ ಪಂಚಮಿಯ ಹಿನ್ನೆಲೆಯಲ್ಲಿ ಭರ್ಜರಿ ಬೆಲೆಯಲ್ಲಿ ಏರಿಕೆ ಕಂಡಿದೆ. ಒಂದು ಸೀಯಾಳಕ್ಕೆ 60ರಿಂದ 70ರೂ. ವರೆಗೆ ಮಾರಾಟಗೊಂಡಿದೆ. ಅದರಲ್ಲೂ ಗೆಂದಾಳಿ ಸೀಯಾಳಕ್ಕೆ ಭಾರಿ ಬೇಡಿಕೆಯಿದೆ.

ಮಳೆಯಿಂದ ಹೂವಿನ ಬೆಳೆಗೆ ಹಾನಿಯಾಗಿ ಈ ಬಾರಿ ನಿರೀಕ್ಷೆಯಷ್ಟು ಇಳುವರಿಯಿಲ್ಲ. ಬೇಡಿಕೆ ಮಾತ್ರ ಹೆಚ್ಚಾಗಿದೆ ಹೀಗಾಗಿ ಮಾರುಕಟ್ಟೆಯಲ್ಲಿ ದರವೂ ಹೆಚ್ಚಳವಾಗಿದೆ. ಮಲ್ಲಿಗೆಗೆ ದರ ಹೆಚ್ಚಳವಿದ್ದರೂ ಬೇಡಿಕೆಯಿದೆ.-ಪದ್ಮನಾಭ, ಹೂ ವ್ಯಾಪಾರಸ್ಥರು ಅಜೆಕಾರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net