ಕೃಷ್ಣಾ ಮೇಲ್ದಂಡೆ ಯೋಜನೆಗೆ ಕೇಂದ್ರದ ನೆರವು; ಮೇಲ್ಮನೆಯಲ್ಲಿ ಸಿಎಂ ಯಡಿಯೂರಪ್ಪ ಹೇಳಿಕೆ

KALA 1
Published on

ಬೆಂಗಳೂರು: ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಕಾಮಗಾರಿಯನ್ನು ಇನ್ನು 3 ವರ್ಷದಲ್ಲಿ ಒಂದು ರೂಪಕ್ಕೆ ತರಲಾಗುವುದು. ಹೆಚ್ಚಿನ ಆರ್ಥಿಕ ನೆರವಿಗಾಗಿ ಕೇಂದ್ರ ಜಲಸಂಪನ್ಮೂಲ ಸಚಿವರೊಂದಿಗೆ ಸಭೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ವಿಧಾನಮಂಡಲದಲ್ಲಿ ರಾಜ್ಯಪಾಲರ ಭಾಷಣದ ಮೇಲೆ ವಿಧಾನಪರಿಷತ್​ನಲ್ಲಿ ಸದಸ್ಯರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಕಳೆದ ಆರೂವರೆ ವರ್ಷಗಳಿಂದ ಕಾಂಗ್ರೆಸ್ ಆಡಳಿತದಲ್ಲಿದೆ. ಆದರೆ, ಕೃಷ್ಣ ಮೇಲ್ದಂಡೆ ಮೂರನೇ ಹಂತದ ಕಾಮಗಾರಿಗೆ ಅನುದಾನ ಮೀಸಲಿಡಲಿಲ್ಲ. ಈ ಬಜೆಟ್​ನಲ್ಲಿ 10 ಸಾವಿರ ಕೋಟಿ ರೂ. ನಿಗದಿ ಮಾಡಲಾಗಿದೆ. ಆದರೂ, ಹೆಚ್ಚುವರಿ ಅನುದಾನ ಮೀಸಲಿಡಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸುತ್ತಿರುವುದು ಸರಿಯಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.

ರಾಜ್ಯದ ರೈತರ ಸರ್ವತೋಮುಖ ಅಭಿವೃದ್ಧಿ ದೃಷ್ಟಿಯಲ್ಲಿಟ್ಟುಕೊಂಡು ಬಜೆಟ್​ನಲ್ಲಿ ನೀರಾವರಿ ಮತ್ತು ಕೃಷಿಗೆ ಆದ್ಯತೆ ನೀಡಲಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಮೂಲಸೌಕರ್ಯಕ್ಕೆ ಒತ್ತು ನೀಡಲಾಗಿದೆ ಎಂದ ಅವರು, ಉತ್ತರ ಕರ್ನಾಟಕದಲ್ಲಿ ಉಂಟಾಗಿದ್ದ ಪ್ರವಾಹದ ವೇಳೆ ಸರ್ಕಾರ ಕೈಗೊಂಡಿದ್ದ ಪರಿಹಾರ ಕಾರ್ಯಗಳನ್ನು ವಿವರಿಸಿದರು.

ಯಾವುದೇ ಹೋರಾಟಕ್ಕೂ ಸಿದ್ಧ: ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸುವ ಕೆಲಸವಾಗುತ್ತಿದೆ. ಅದರಿಂದ ಯೋಜನೆ ಮತ್ತಷ್ಟು ವಿಳಂಬವಾಗಲಿದೆ. ಅದನ್ನು ಬಿಟ್ಟು, ರಾಜ್ಯ ಸರ್ಕಾರವೇ ಯೋಜನೆ ಜಾರಿಗೆ ಹೆಚ್ಚಿನ ಅನುದಾನ ಮೀಸಲಿಡಬೇಕು. ಯೋಜನೆಗಾಗಿ ಯಾವುದೇ ರೀತಿಯ ಹೋರಾಟಕ್ಕೂ ಸಿದ್ಧವಿದ್ದೇವೆ ಎಂದು ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್ ಎಚ್ಚರಿಕೆ ನೀಡಿದರು.

ವಿಪಕ್ಷಗಳನ್ನು ಕಿಚಾಯಿಸಿದ ಸಿಎಂ

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ 25 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಜತೆಗೆ 15 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಉಪ ಚುನಾವಣೆಯಲ್ಲಿ 12ರಲ್ಲಿ ಜಯಭೇರಿ ಭಾರಿಸಿದೆ. ವಿಪಕ್ಷಗಳು ಈಗಲಾದರೂ ನಮ್ಮದು ಜನಾದೇಶದ ಸರ್ಕಾರ ಎಂದು ಒಪ್ಪಿಕೊಳ್ಳಲಿ ಎಂದು ಯಡಿಯೂರಪ್ಪ ವಿಧಾನಪರಿಷತ್​ನಲ್ಲಿ ವಿರೋಧ ಪಕ್ಷದ ಸದಸ್ಯರನ್ನು ಕಿಚಾಯಿಸಿದರು.

ಮುಖ್ಯಮಂತ್ರಿಗಳ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್-ಜೆಡಿಎಸ್ ಸದಸ್ಯರು, ಉಪಚುನಾವಣೆಯಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಆಮೂಲಕ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂದು ಆರೋಪಿಸಿದರು. ಕಾಂಗ್ರೆಸ್- ಜೆಡಿಎಸ್ ಶಾಸಕರಿಂದ ರಾಜೀನಾಮೆ ಪಡೆದು ಅಧಿಕಾರಕ್ಕೆ ಬಂದಿದ್ದೀರಿ.

ರಾಜೀನಾಮೆ ನೀಡಿದ್ದ ಶಾಸಕರನ್ನು 15 ದಿನಗಳ ಕಾಲ ಮುಂಬೈನಲ್ಲಿ ಕೂಡಿಹಾಕಿ, ಅವರ ಕುಟುಂಬದ ಸದಸ್ಯರಿಂದಲೂ ದೂರವಿರಿಸಲಾಗಿತ್ತು. ಇದು ದೊಡ್ಡ ಸಾಧನೆಯೇ ಎಂದು ಪ್ರಶ್ನಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ಸದಸ್ಯರು, ಕಾನೂನು ಬದ್ಧವಾಗಿ ಅಧಿಕಾರಕ್ಕೆ ಬಂದಿದ್ದೇವೆ. ಉಪಚುನಾವಣೆಯಲ್ಲಿ ಕಾಂಗ್ರೆಸ್ ಸದಸ್ಯರು ಗೆದ್ದಿದ್ದರೆ ಇದೇ ಮಾತನ್ನು ಹೇಳಲು ಸಾಧ್ಯವೇ ಎಂದು ತಿರುಗೇಟು ನೀಡಿದರು. ಈ ವಾಗ್ವಾದ ನಡೆಯುವಾಗ ಬಿಎಸ್​ವೈ ಮಾತ್ರ ಎರಡೂ ಕಡೆ ಸದಸ್ಯರನ್ನು ನೋಡಿ ನಗುತ್ತಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net