

ಮೈಸೂರು: ನಾಲಿಗೆ ಇದೆ ಎಂದು ತೆವಲಿಗಾಗಿ ಮಾತನಾಡಬಾರದು ಎಂದು ಸಚಿವ ಬಿ.ಸಿ. ಪಾಟೀಲ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ತಿರುಗೇಟು ನೀಡಿದ್ದಾರೆ.
ಮುಖ್ಯಮಂತ್ರಿಯಾಗಿದ್ದಾಗ ಕುಮಾರಸ್ವಾಮಿ ಸಾಲಮನ್ನಾ ಘೊಷಣೆ ಮಾಡಿದರೆ ವಿನಾ ಅದಕ್ಕೆ ಸೂಕ್ತ ರೂಪುರೇಷೆ ಹಾಕಿ ಅನುದಾನ ಇಟ್ಟಿರಲಿಲ್ಲ. ಯಡಿಯೂರಪ್ಪ ಅದನ್ನು ಈಗ ನಿಭಾಯಿಸುತ್ತಿದ್ದಾರೆ ಎಂದು ಬಿ.ಸಿ. ಪಾಟೀಲ್ ಟೀಕಿಸಿದ್ದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್ಡಿಕೆ, ಸುಮ್ಮನೆ ಸುಳ್ಳು ಹೇಳಿಕೊಂಡು ಓಡಾಡುವ ಬಿ.ಸಿ. ಪಾಟೀಲ್ಗೆ ಸಾಲ ಮನ್ನಾದ ಬಗ್ಗೆ ಮಾಹಿತಿಯೇ ಇಲ್ಲ. ನಾನು ಅಧಿಕಾರದಿಂದ ಇಳಿಯುವಾಗ ಬರೀ ಘೊಷಣೆ ಮಾಡಿಲ್ಲ. ಬದಲಿಗೆ 25 ಸಾವಿರ ಕೋಟಿ ರೂ. ಹೊಂದಿಸಿ ಕೆಳಗೆ ಇಳಿದಿದ್ದೇನೆ. ಅಲ್ಲದೆ ನಾನು ಅನುಮೋದನೆ ನೀಡಿದ್ದ 800 ಕೋಟಿ ರೂ. ಅನ್ನು ಬಿಡುಗಡೆ ಮಾಡದೆ ಹಾಗೆಯೇ ಇಟ್ಟುಕೊಂಡಿದ್ದಾರೆ ಎಂದರು. ರೈತರಿಂದ ಸರಳ ದಾಖಲೆ ಮಾತ್ರ ಕೇಳಿದ್ದೆವು. ದಾಖಲೆ ತಪ್ಪಿದ್ದರೆ ಸರಿಪಡಿಸೋದು ಕೃಷಿ ಇಲಾಖೆ ಕೆಲಸ. ತಮ್ಮ ಕೆಲಸವನ್ನು ಬಿಟ್ಟು ಮತ್ತೊಬ್ಬರ ಬಗ್ಗೆ ಟೀಕೆ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.