

ಹಾಸನ: ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ (ಹುಡಾ) ನೂತನ ಅಧ್ಯಕ್ಷರಾಗಿ ಕುರುಬ ಸಮಾಜದ ಜಿಲ್ಲಾಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಪಟೇಲ್ ಶಿವಪ್ಪ ಸೋಮವಾರ ಅಧಿಕಾರ ಸ್ವೀಕರಿಸಿದರು.
ಹುಡಾ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಕಾರ್ಯಭಾರ ವಹಿಸಿಕೊಂಡರು.ಕಳೆದ ಎರಡು ವರ್ಷಗಳಿಂದ ಈ ಹುದ್ದೆ ಖಾಲಿಯಾಗಿದ್ದು, ನೇಮಕಾತಿ ಕುರಿತು ಹಲವು ರಾಜಕೀಯ ಪೈಪೋಟಿಗಳು ನಡೆದಿದ್ದರಿಂದ ಸರ್ಕಾರ ತೀರ್ಮಾನ ಕೈಗೊಳ್ಳುವಲ್ಲಿ ವಿಳಂಬವಾಗಿತ್ತು. ಹಾಸನ ಸ್ಥಳೀಯ ನಾಯಕರ ಒತ್ತಡಕ್ಕೂ ಮಣಿಯದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಪಟೇಲ್ ಶಿವಪ್ಪ ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿತ್ತು.
ಅಧಿಕಾರ ವಹಿಸಿಕೊಳ್ಳುವ ಸಂದರ್ಭ ಅರಸೀಕೆರೆ ಭಾಗದ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಆದರೆ ಹಾಸನ ನಗರದ ಪ್ರಮುಖ ನಾಯಕರು ಬಹುಮಟ್ಟಿಗೆ ಗೈರುಹಾಜರಾಗಿದ್ದರು.
ಸ್ಥಳೀಯ ನಾಯಕರ ಅಸಮಾಧಾನ: ಹಾಸನ ನಗರದ ಸ್ಥಳೀಯರಿಗೆ ಅಧ್ಯಕ್ಷ ಹುದ್ದೆ ನೀಡಬೇಕು ಎಂದು ವಿವಿಧ ಸಂಘಟನೆಗಳು ಹಾಗೂ ನಗರ ಮುಖಂಡರು ಹಲವು ಬಾರಿ ಸರ್ಕಾರದ ವಿರುದ್ಧ ಒತ್ತಡ ಹೇರಿದ್ದರು. ಆದರೆ, ಆ ಬೇಡಿಕೆ ಕಡೆಗಣಿಸಲ್ಪಟ್ಟ ಹಿನ್ನೆಲೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ ನಗರದ ಬಹುತೇಕ ನಾಯಕರು ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಹಾಜರಾಗಲಿಲ್ಲ.
ಶಿವಪ್ಪ ಅಧಿಕಾರ ಸ್ವೀಕರಿಸಿದ ನಂತರ, ನಗರಾಭಿವೃದ್ಧಿ ಪ್ರಾಧಿಕಾರದ ಮೂಲಕ ಹಾಸನದಲ್ಲಿ ಬಾಕಿ ಉಳಿದ ಯೋಜನೆಗಳನ್ನು ವೇಗವಾಗಿ ಪೂರ್ಣಗೊಳಿಸುವುದು ನನ್ನ ಆದ್ಯತೆ. ಎಲ್ಲರ ಸಹಕಾರದೊಂದಿಗೆ ಹಾಸನದ ಅಭಿವೃದ್ಧಿಗೆ ಕೆಲಸ ಮಾಡುವೆ ಎಂದರು. ಸಂಸದ ಶ್ರೇಯಸ್ ಪಟೇಲ್, ಮಾಜಿ ರಾಜ್ಯ ಸಭಾ ಸದಸ್ಯ ಎಚ್.ಕೆ. ಜವರೇಗೌಡ, ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡ, ಮುಖಂಡರಾದ ಶಶಿಧರ್, ಕೃಷ್ಣೇಗೌಡ, ಗ್ರಾನೈಟ್ ರಾಜಶೇಖರ್ ಇತರರು ಇದ್ದರು.