

ಬೆಂಗಳೂರು: ಹ್ಯೂಮನ್ ಪ್ಯಾಪಿಲೋನ ವೈರಸ್ (ಎಚ್‌ಪಿವಿ)ನಿಂದ ರಕ್ಷಣೆ ಮತ್ತು ಸಂಭಾವ್ಯ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ರಾಜ್ಯದ ನಾಲ್ಕು ಗಣಿಗಾರಿಕೆ ಜಿಲ್ಲೆಗಳ 8 ತಾಲೂಕುಗಳಲ್ಲಿ 14 ವರ್ಷದ ಹೆಣ್ಣು ಮಕ್ಕಳಿಗೆ ಎಚ್‌ಪಿವಿ ಲಸಿಕೆ ನೀಡುವ ಕಾರ್ಯಕ್ರಮ ಕೈಗೊಳ್ಳಲು ಸರ್ಕಾರ ಆದೇಶ ಹೊರಡಿಸಿದೆ.
ಈ ಲಸಿಕೆ ವಿತರಣೆ ಬಗ್ಗೆ ರಾಜ್ಯ ಸರ್ಕಾರವು 2025-26ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿತ್ತು. ಗರ್ಭಕಂಠ ಕ್ಯಾನ್ಸರ್ ತಡೆಗೆ 9ರಿಂದ 14 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಎರಡು ಡೋಸ್ ಎಚ್‌ಪಿವಿ ಲಸಿಕೆ ಒದಗಿಸುವ ಬಗ್ಗೆ ಈ ಹಿಂದೆ ತಜ್ಞರ ಸಮಿತಿಯೂ ಶಿಫಾರಸು ಮಾಡಿತ್ತು. ಅದರಂತೆ ನಾಲ್ಕು ಗಣಿಬಾಧಿತ ಜಿಲ್ಲೆಗಳ 8 ತಾಲೂಕುಗಳಲ್ಲಿ 14 ವರ್ಷದ ಹೆಣ್ಣು ಮಕ್ಕಳಿಗೆ ಎಚ್‌ಪಿವಿ ಲಸಿಕೆ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ.
ಎಚ್‌ಪಿವಿ ಲಸಿಕೆಯ ಪ್ರತಿ ಡೋಸ್‌ಗೆ 1,260 ರೂ. ದರ ನಿಗದಿಪಡಿಸಲಾಗಿದೆ. ಕಾರ್ಯಕ್ರಮ ಜಾರಿಗೆ ಕರ್ನಾಟಕ ಗಣಿಗಾರಿಕೆ ಪರಿಸರ ಪುನಃಸ್ಥಾಪನೆ ನಿಗಮ (ಕೆಎಂಇಆರ್‌ಸಿ) ಅನುಮೋದಿಸಿರುವಂತೆ ತುಮಕೂರು ಜಿಲ್ಲೆಗೆ 76 ಲಕ್ಷ ರೂ, ಬಳ್ಳಾರಿ ಜಿಲ್ಲೆಗೆ 186 ಲಕ್ಷ ರೂ. ಚಿತ್ರದುರ್ಗ ಜಿಲ್ಲೆಗೆ 76 ಲಕ್ಷ ರೂ. ಹಾಗೂ ವಿಜಯನಗರ ಜಿಲ್ಲೆಗೆ 136 ಲಕ್ಷ ರೂ. ಸೇರಿ 4.74 ಕೋಟಿ ರೂ.ಗಳನ್ನು ಒದಗಿಸಲಾಗಿದೆ.
ಈ ಲಸಿಕೆ ಕಾರ್ಯಕ್ರಮದಡಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಬಿಪಿಎಲ್ ಕಾರ್ಡ್ ಹೊಂದಿರುವ 14 ವರ್ಷ ವಯಸ್ಸಿನ ಸರ್ಕಾರಿ ಶಾಲೆ, ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಕಲಿಯುತ್ತಿರುವ ಹಾಗೂ ಶಾಲೆ ಬಿಟ್ಟವರು ಸೇರಿ 37,470 ಹೆಣ್ಣಮಕ್ಕಳನ್ನು ಗುರುತಿಸಲಾಗಿದ್ದು, 2 ಡೋಸ್‌ಗಳ ಲಸಿಕೆಯನ್ನು ನಿಗದಿತ ಅವಧಿಯೊಳಗೆ ನೀಡುವಂತೆ ಸೂಚಿಸಲಾಗಿದೆ. ಅಗತ್ಯ ಇರುವ ಲಸಿಕೆಗಳನ್ನು ಕೆಟಿಪಿಪಿ ಕಾಯ್ದೆ ನಿಯಮಗಳನ್ನು ಅನುಸರಿಸಿ ಕೆಎಸ್‌ಎಂಎಸ್‌ಸಿಎಲ್ ಮುಖಾಂತರ ಸಂಗ್ರಹಿಸಿ ಆರೋಗ್ಯ ಇಲಾಖೆಯ ಲಸಿಕಾ ವಿಭಾಗದಿಂದ ಕಾರ್ಯಕ್ರಮ ಅನುಷ್ಠಾನಗೊಳಿಸಬೇಕು. ಎಚ್‌ಪಿವಿ ಲಸಿಕೆಯನ್ನು ಭಾರತೀಯ ಪ್ರಸೂತಿ ಮತ್ತು ಸೀರೋಗ ಶಾಸ ಸಂಘಗಳ ಒಕ್ಕೂಟದ ಮಾರ್ಗಸೂಚಿಗಳನ್ವಯ ನೀಡಲು ಕ್ರಮವಹಿಸುವಂತೆ ಸರ್ಕಾರದ ಅಧೀನ ಕಾರ್ಯದರ್ಶಿ ಪವಿತ್ರಾ ಆದೇಶದಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮ ನಡೆಯುವ ಸ್ಥಳ:
ತುಮಕೂರು ಜಿಲ್ಲೆಯ ಗುಬ್ಬಿ, ಚಿಕ್ಕನಾಯಕನಹಳ್ಳಿ ಮತ್ತು ತಿಪಟೂರು ತಾಲೂಕು. ಬಳ್ಳಾರಿಯ ಸಂಡೂರು, ಚಿತ್ರದುರ್ಗದ ಹೊಳಲ್ಕೆರೆ, ಹೊಸದುರ್ಗ ಮತ್ತು ಮೊಳಕಾಲ್ಮೂರು ಹಾಗೂ ವಿಜಯನಗರದ ಹೊಸಪೇಟೆಯಲ್ಲಿ ಲಸಿಕೆ ಕಾರ್ಯಕ್ರಮ ನಡೆಯಲಿದೆ.