

ಗಂಗಾಧರ್ ಬೈರಾಪಟ್ಟಣ
ರಾಮನಗರ: ರಜೆಯನ್ನು ಎಂಜಾಯ್ ಮಾಡಲು ಹೋಂ ಸ್ಟೇಗೆ ಹೋಗಿದ್ದ ಮಹಿಳೆಯೊಬ್ಬರು ಜಿಫ್‌ಲೈನ್ ತುಂಡಾಗಿ ಮೃತಪಟ್ಟಿರುವ ಘಟನೆ ಇದೀಗ ರೆಸಾರ್ಟ್‌ಗಳಲ್ಲಿನ ಸುರಕ್ಷತೆ ಬಗ್ಗೆ ಅನುಮಾನ ಮೂಡುವಂತೆ ಆಗಿದ್ದು, ಪ್ರವಾಸೋಧ್ಯಮ ಇಲಾಖೆ ಸೇರಿದಂತೆ ಸಂಬಂಧಪಟ್ಟ ಇಲಾಕೆಗಳ ನಿರ್ಲಕ್ಷೃ ಎದ್ದು ಕಾಣುತ್ತಿದೆ.
ಭಾನುವಾರ ಹಾರೋಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಖಾಸಗಿ ರೆಸಾರ್ಟ್‌ನಲ್ಲಿ ಜಿಫ್ ಲೈನ್ ತುಂಡಾಗಿ ಪ್ರವಾಸಕ್ಕೆ ಬಂದಿದ್ದ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಈ ಘಟನೆ ಈಗ ಜಿಲ್ಲೆಯಲ್ಲಿ ಎಲ್ಲಾ ರೆಸಾರ್ಟ್‌ಗಳಲ್ಲಿ ನಡೆಯುವ ಕ್ರೀಡಾ ಚಟುವಟಿಕೆಗಳು ತರಬೇತಿ ಹೊಂದಿದವರಿಂದ ನಿರ್ವಹಣೆ ಆಗುತ್ತಿವೆಯೇ?, ಈ ಸಂಬಂಧ ಪ್ರವಾಸೋಧ್ಯಮ ಇಲಾಕೆ ಹಾಗೂ ಜಿಲ್ಲಾಢಳಿತ ಕ್ರಮವಹಿಸಿದೆಯೇ ಎನ್ನುವ ಪ್ರಶ್ನೆಯನ್ನು ಹುಟ್ಟಿಹಾಕಿದೆ.
ಲಭ್ಯ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಅಧಿಕೃತ ರೆಸಾರ್ಟ್ ಮತ್ತು ಹೋಂ ಸ್ಟೇಗಳಿಗಿಂತ ಅನಧಿಕೃತವುಗಳ ಸಂಖ್ಯೇಯೆ ಹೆಚ್ಚಿವೆ. ಜಿಲ್ಲೆಯಲ್ಲಿ 32 ಹೋಂ ಸ್ಟೇ ಮತ್ತು 9 ರೆಸಾರ್ಟ್‌ಗಳು ಮಾತ್ರ ಪ್ರವಾಸೋಧ್ಯಮ ಇಲಾಕೆಯಡಿ ನೋಂದಣಿಯಾಗಿವೆ ಎನ್ನುವ ಮಾಹಿತಿ ಲಭ್ಯವಾಗಿದೆ. ಕ್ರೀಡಾ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಕೇವಲ ಒಂದು ರೆಸಾರ್ಟ್ ಮಾತ್ರ ಅನುಮತಿ ಪಡೆದುಕೊಂಡಿದೆ ಎಂದು ತಿಳಿದು ಬಂದಿದೆ.
ಆದರೆ, ನಾಯಿ ಕೊಡೆಗಳಂತೆ ಎಲ್ಲೆಂದರಲ್ಲಿ ಹೋಂ ಸ್ಟೇಗಳು ತಲೆ ಎತ್ತಿದ್ದು, ಇವುಗಳಿಗೆ ಸ್ಥಳೀಯ ಪಂಚಾಯಿತಿಗಳಿಂದ ಅನುಮತಿ ಪಡೆದುಕೊಂಡು ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿ ಏನೆಲ್ಲಾ ಚಟುವಟಿಕೆಗಳು ನಡೆಯುತ್ತಿವೆ ಎನ್ನುವ ಮಾಹಿತಿ ಸಂಬಂಧಪಟ್ಟ ಇಲಾಕೆಗೆ ಇಲ್ಲವೇ ಇಲ್ಲ.
ಯಾವುದೇ ಕ್ರೀಡಾ ಚಟುವಟಿಕೆಗಳನ್ನು ನಡೆಸುವ ಹೋಂ ಸ್ಟೇಗಳಾಗಲಿ ಮತ್ತು ರೆಸಾರ್ಟ್‌ಗಳಾಗಲಿ ತರಬೇತಿ ಹೊಂದಿದ ವ್ಯಕ್ತಿಗಳಿಂದ ಇವುಗಳನ್ನು ನಿರ್ವಹಣೆ ಮಾಡಿಸಬೇಕಿದೆ. ಆದರೆ ಇದರ ಬಗ್ಗೆ ಸೂಕ್ತ ಮಾಹಿತಿಯೇ ಮಾಲೀಕರಿಗೆ ಇಲ್ಲ. ಕಂದಾಯ, ಪೊಲೀಸ್, ಆಹಾರ ಸುರಕ್ಷತೆ, ಗ್ರಾಪಂ, ಅಗ್ನಿ ಶಾಮಕ, ಸಾಹಸ ಕ್ರೀಡೆಗಳ ತರಬೇತಿ ಸಂಸ್ಥೆ, ಆದಾಯ ತೆರಿಗೆ ಇಲಾಕೆ ಹೀಗೆ ಹಲವಾರು ಇಲಾಕೆಗಳ ಅನುಮತಿ ಹೋಂ ಸ್ಟೇಗಳಿಗೆ ಬೇಕಿದೆ. ಆದರೆ ಇವುಗಳನ್ನು ತೆಗೆದುಕೊಳ್ಳಬೇಕೆ, ಯಾರನ್ನು ಸಂಪರ್ಕಿಸಬೇಕು ಎನ್ನುವ ಸೂಕ್ತ ಮಾಹಿತಿಯೂ ಸಹ ಇಲ್ಲ. ಇದನ್ನು ನೀಡಬೇಕಾದ ಪ್ರವಾಸೋಧ್ಯಮ ಇಲಾಕೆ ಈವರೆವಿಗೂ ತಲೆ ಕಡೆಸಿಕೊಂಡಿಲ್ಲ.
ಪ್ರವಾಸೋಧ್ಯಮ ಇಲಾಕೆ ಸಹಾಯ ನಿರ್ದೇಶಕ ರವಿಕುಮಾರ್ ನೀಡುವ ಮಾಹಿತಿಯಂತೆ ಕಳೆದ 10 ದಿನಗಳ ಹಿಂದೆಯೇ ಮಹಿಳೆ ಸಾವಿಗೀಡಾದ ರೆಸಾರ್ಟ್‌ನ ಮಾಲೀಕರಿಗೆ ನೋಟೀಸ್ ಜಾರಿಗೊಳಿಸಿ, ಅಗತ್ಯ ಮಾಹಿತಿಯನ್ನು ಒದಗಿಸುವಂತೆ ಸೂಚನೆ ನೀಡಲಾಗಿದೆ. ಆದರೆ, ಅವರಿಂದ ಯಾವುದೇ ಮಾಹಿತಿ ಇಲಾಕೆಗೆ ಲಭ್ಯವಾಗಿರಲಿಲ್ಲ. ಈ ನಡುವೆ ಇದೇ ರೆಸಾರ್ಟ್‌ನಲ್ಲಿಯೇ ಇದಕ್ಕೂ ಮುನ್ನಾ ಮಹಿಳೆಯೊಬ್ಬರು ಈಜುಕೊಳದಲ್ಲಿ ಮುಳುಗಿ ಮೃತಪಟ್ಟಿದ್ದರು ಎನ್ನಲಾಗಿದೆ.
ರಾಮನಗರ ಜಿಲ್ಲೆ ಬೆಂಗಳೂರಿಗೆ ಹತ್ತಿರಲ್ಲಿಯೇ ಇರುವ ಕಾರಣ, ಪ್ರವಾಸಿಗರನ್ನು ತನ್ನತ್ತ ಕೈ ಬೀಸಿ ಕರೆಯುತ್ತಿದ್ದು, ಪ್ರವಾಸೋಧ್ಯಮವೂ ಸಹ ಬೆಳವಣಿಗೆ ಕಾಣುತ್ತಿದೆ. ಈ ಬೆಳವಣಿಗೆಯಲ್ಲಿ ಹೋಂ ಸ್ಟೇ ಮತ್ತು ರೆಸಾರ್ಟ್‌ಗಳ ಪಾತ್ರವೂ ಸಹ ಗಣನೀಯ. ಆದರೆ ಪ್ರವಾಸಿಗರ ಸುರಕ್ಷತೆ ಮೊದಲ ಆಧ್ಯತೆ ಆಗಬೇಕಿದ್ದು, ಈ ನಿಟ್ಟಿನಲ್ಲಿ ಪ್ರವಾಸೋಧ್ಯಮ ಇಲಾಕೆ ಅನಧಿಕೃತ ಹೋಂ ಸ್ಟೇಗಳು ಮತ್ತು ರೆಸಾರ್ಟ್‌ಗಳಿಗೆ ಕಡಿವಾಣ ಹಾಕುವ ಮತ್ತು ನೋಂದಾಯಿತ ಹೋಂ ಸ್ಟೇಗಳಲ್ಲಿ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕಿದೆ. ಇದರ ಜೊತೆಗೆ ಬೇಕಾದ ಅನುಮತಿಗಳು ಏಕಗವಾಕ್ಷಿ ಯೋಜನೆಯಡಿ ದೊರೆಯವಂತೆ ಮಾಡಬೇಕು ಹಾಗೂ ಅಗತ್ಯ ತರಬೇತಿಗಳನ್ನು ಕೊಡಿಸುವ ಕೆಲಸವನ್ನು ಜಿಲ್ಲಾಢಳಿತ ಮತ್ತು ಪ್ರವಾಸೋಧ್ಯಮ ಇಲಾಕೆ ಮಾಡಬೇಕಿದೆ.