ಹೇಗಿರುತ್ತೆ ಕರೊನಾ ಚಿಕಿತ್ಸೆ?: ಪತ್ರಿಕೆ, ರೇಡಿಯೋಗೆ ಅವಕಾಶ, ಕಿಮ್ಸ್​ನಲ್ಲಿ ಸೋಂಕಿತ ಚೇತರಿಕೆ

Corona Treat
Published on

ಹುಬ್ಬಳ್ಳಿ: ರಾಜ್ಯದಲ್ಲಿ ಕರೊನಾ ಪೀಡಿತರ ಸಂಖ್ಯೆ ನೂರು ಸಮೀಪಿಸುತ್ತಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಿಗೆ ಆಸ್ಪತ್ರೆಗಳಲ್ಲಿ ಹೇಗೆ ಉಪಚಾರ ಮಾಡಲಾಗುತ್ತದೆ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ. ಹುಬ್ಬಳ್ಳಿಯ ಕಿಮ್ಸ್​ನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಧಾರವಾಡ ಜಿಲ್ಲೆಯ ಸೋಂಕಿತ ವ್ಯಕ್ತಿಗೆ ವಿಶೇಷ ಕಾಳಜಿ ತೋರಲಾಗುತ್ತಿದೆ. ಸಮಯಕ್ಕೆ ಸರಿಯಾಗಿ ಉಪಾಹಾರ, ಊಟ, ಓದಲು ಪತ್ರಿಕೆ, ಕೇಳಲು ರೇಡಿಯೋವನ್ನೂ ಒದಗಿಸಲಾಗಿದೆ.

ಬೆಳಗ್ಗೆ ಉಪಾಹಾರವನ್ನು (ಉಪ್ಪಿಟ್ಟು, ಅವಲಕ್ಕಿ ಇತರೆ) ವಾರ್ಡ್​ಬಾಯ್ನಿಂದ ಟೇಬಲ್ ಮೂಲಕ ಕಳುಹಿಸಲಾಗುತ್ತದೆ. ಮಧ್ಯಾಹ್ನ ಚಪಾತಿ, ಅನ್ನ-ಸಾಂಬರ್ ಕಳುಹಿಸಲಾಗುತ್ತದೆ. ಆತ ಆಹಾರ ಸೇವಿಸಿದ ಕಾಗದವನ್ನು ಸಿಬ್ಬಂದಿ ಕೈಯಿಂದ ಮುಟ್ಟದೇ ಹೊರಗಡೆ ತಂದು ಗಾಳಿಗೆ ಪಸರಿಸದಂತೆ ಸುಡುತ್ತಿದ್ದಾರೆ. ಆತ ತೊಟ್ಟ ಬಟ್ಟೆಗಳನ್ನೂ ಇದೇ ರೀತಿ ಮಾಡಲಾಗುತ್ತದೆ. ಸೋಂಕಿತ ವ್ಯಕ್ತಿಯನ್ನು ನೋಡಲು ಸಂಬಂಧಿಕರಿಗೆ, ಮನೆಯವರಿಗೆ ಅವಕಾಶವಿಲ್ಲ.

ತಜ್ಞರ ತಂಡ: ನಿತ್ಯ ನಾಲ್ವರು ವೈದ್ಯರು ಸರತಿ ಮೇಲೆ ಸೋಂಕಿತನನ್ನು ಪರೀಕ್ಷಿಸುತ್ತಿದ್ದಾರೆ. ಇತರೆ ತಜ್ಞರೂ ಆಗಾಗ ಭೇಟಿ ನೀಡುತ್ತಾರೆ. ಸೋಂಕಿತರ ರಕ್ಷಣೆಗಾಗಿ ಕಿಮ್್ಸ ಆಡಳಿತ ಮಂಡಳಿ ತಜ್ಞರ ತಂಡವನ್ನು ನಿಯೋಜಿಸಿದೆ. ಅದರಲ್ಲಿ ಕಿವಿ, ಮೂಗು, ಬಾಯಿ(ಇಎನ್​ಟಿ), ವೈದ್ಯಕೀಯ ಹಾಗೂ ಶ್ವಾಸಕೋಶ, ಅರಿವಳಿಕೆ/ಇಂಟೆನ್ಸಿವಿಸ್ಟ್ ವೈದ್ಯರು ಇದ್ದಾರೆ.

ಚೇತರಿಕೆ: ಸೋಂಕಿತ ವ್ಯಕ್ತಿಗೆ ಚಿಕಿತ್ಸೆ ನೀಡಿದ ನಂತರ ಮತ್ತೆ ಎರಡು ಮಾದರಿಗಳನ್ನು ಲ್ಯಾಬ್​ಗೆ ಕಳುಹಿಸಲಾಗಿದ್ದು, ವರದಿಗಳು ವೈದ್ಯರ ಕೈ ಸೇರಿವೆ. ವರದಿಗಳು ನೆಗೆಟಿವ್ ಇವೆ ಎನ್ನಲಾಗುತ್ತಿದೆ. ಆತ ಸಂಪೂರ್ಣ ಚೇತರಿಸಿಕೊಂಡಿದ್ದಾನೆ ಎಂದು ಖಾತ್ರಿಯಾಗುವವರೆಗೆ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ.

ದಿನಪತ್ರಿಕೆ, ನಿಯತಕಾಲಿಕೆ

ಓದುವ ಹವ್ಯಾಸ ಇರುವ ಸೋಂಕಿತನಿಗೆ ದಿನಪತ್ರಿಕೆ, ಕೆಲ ನಿಯತಕಾಲಿಕೆ ನೀಡಲಾಗಿದೆ. ಮೊದಲು ಮೊಬೈಲ್ ಬಳಕೆ ಮಾಡಲು ಅವಕಾಶ ನೀಡಲಾಗಿತ್ತಾದರೂ ಈಗ ನಿರ್ಬಂಧಿಸಲಾಗಿದೆ. ಸಂಗೀತ, ವಾರ್ತೆಗಳನ್ನು ಕೇಳಲು ರೇಡಿಯೋ ಕೂಡ ನೀಡಲಾಗಿದೆ. ಕೊಠಡಿಯೊಳಗೆ ವೈದ್ಯರು, ಸ್ಟಾಫ್ ನರ್ಸ್, ಆಯಾ, ವಾರ್ಡ್​ಬಾಯ್ ಬಿಟ್ಟರೆ ಮತ್ಯಾರಿಗೂ ಪ್ರವೇಶವಿಲ್ಲ. ಅವರೆಲ್ಲರೂ ಪರ್ಸನಲ್ ಪ್ರೊಟೆಕ್ಷನ್ ಇಕ್ವಿಪ್​ವೆುಂಟ್(ಪಿಪಿಇ) ಧರಿಸಿಯೇ ಸೋಂಕಿತ ವ್ಯಕ್ತಿಯ ಕೊಠಡಿಯನ್ನು ಪ್ರವೇಶಿಸಬೇಕು.

ಸೋಂಕಿತನ ಆರೋಗ್ಯ ಸ್ಥಿರವಾಗಿದೆ. ಸರ್ಕಾರದ ನಿರ್ದೇಶನದಂತೆ ವೈದ್ಯರು ಔಷಧೋಪಚಾರ ನೀಡುತ್ತಿದ್ದಾರೆ. ವೈದ್ಯರ ವರದಿ ಮೇಲೆ ಆಸ್ಪತ್ರೆಯಿಂದ ಬಿಡುಗಡೆ ಮಾಡಬೇಕೋ ಬೇಡವೋ ಎಂಬುದು ನಿರ್ಧರಿತವಾಗುತ್ತದೆ. | ದೀಪಾ ಚೋಳನ್ ಧಾರವಾಡ ಜಿಲ್ಲಾಧಿಕಾರಿ

| ಮರಿದೇವ ಹೂಗಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net