

ನವದೆಹಲಿ: ಕರೊನಾ ವೈರಸ್ ಹೆಸರಿನಲ್ಲಿ ಭಾರಿ ಪ್ರಮಾಣದ ವಂಚನೆ ನಡೆಯುತ್ತಿದ್ದು, ಜನರು ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಸ್ಪೈಮ್ಯಾಕ್ಸ್, ಕರೊನಾ ಲೈವ್ 1.1 ಇತ್ಯಾದಿ ಹೆಸರಿನ ಆ್ಯಪ್ಗಳನ್ನು ಡೌನ್ಲೋಡ್ ಮಾಡಿಕೊಳ್ಳುವಂತೆ ವಂಚಕರು ಬಲೆ ಬೀಸುತ್ತಿದ್ದಾರೆ. ಇವುಗಳನ್ನು ನಂಬಿ ನೀವೇನಾದರೂ ಇಂಥ ಆ್ಯಪ್ಗಳನ್ನು ಡೌನ್ಲೋಡ್ ಮಾಡಿಕೊಂಡರೆ ನಿಮ್ಮ ಸ್ಮಾರ್ಟ್ಪೋನ್ ಅಥವಾ ಕಂಪ್ಯೂಟರ್ನಲ್ಲಿರುವ ವೈಯಕ್ತಿಕ ಮಾಹಿತಿಗಳು ಈ ಸೈಬರ್ ವಂಚಕರ ಪಾಲಾಗುತ್ತವೆ. ಜತೆಗೆ, ಕರೊನಾ ಸಂತ್ರಸ್ತರಿಗಾಗಿ ನಿಧಿ ಸಂಗ್ರಹದ ಹೆಸರಿನಲ್ಲಿಯೂ ವಂಚನೆ ನಡೆಯುತ್ತಿದೆ. ಈ ಬಗ್ಗೆ ಕೇಂದ್ರ ಗೃಹ ಸಚಿವಾಲಯ ಕೆಲವೊಂದು ಸುರಕ್ಷತೆಯ ಟಿಪ್ಸ್ ಅನ್ನು ನೀಡಿದೆ.
ಸುರಕ್ಷತೆಯ ಟಿಪ್ಸ್
* ಕರೊನಾ ವೈರಸ್ ಹೆಸರಿನಲ್ಲಿ ಯಾವುದೇ ಲಿಂಕ್ ಡೌನ್ಲೋಡ್ ಮಾಡುವಂತೆ ಮಾಹಿತಿ ಬಂದಾಗ ಎಚ್ಚರಿಕೆ ವಹಿಸಿ
* ಕರೊನಾ ಹೆಸರಿನಲ್ಲಿ ವೈಯಕ್ತಿಕ ಮಾಹಿತಿಯನ್ನು ಹ್ಯಾಕ್ ಮಾಡಲು ಅವಕಾಶ ನೀಡಬೇಡಿ. ಯಾವುದೇ ಸಂದರ್ಭದಲ್ಲಿ ನಿಮ್ಮ ವೈಯಕ್ತಿಕ ಹಾಗೂ ಸೂಕ್ಷ್ಮ ಮಾಹಿತಿಗಳನ್ನು ಫೋನ್ ಕಾಲ್ನಲ್ಲಿ ನೀಡಬೇಡಿ.
* ಕರೊನಾ ಹೆಸರಿನಲ್ಲಿ ಯಾವುದೇ ನಿಧಿ ಸಂಗ್ರಹ ಮಾಡುವಂತೆ ಮಾಹಿತಿ ಬಂದಾಗ ಸರಿಯಾಗಿ ವಿಚಾರಿಸಿ, ಸತ್ಯಾಸತ್ಯತೆಯನ್ನು ಅರಿತ ನಂತರವಷ್ಟೇ ಹಣವನ್ನು ನೀಡಿ.