

ಬೆಂಗಳೂರು: ಕೇಂದ್ರದ ಕೃಷಿ ಮಸೂದೆ, ಎಪಿಎಂಸಿ ಕಾಯ್ದೆ, ರಾಜ್ಯದ ಭೂಸುಧಾರಣಾ ಕಾಯ್ದೆ ವಿರೋಧಿಸಿ ರೈತರು ಇಂದು ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜ್ಯದಲ್ಲೂ ಪ್ರತಿಭಟನೆಯ ಕಾವು ಹೆಚ್ಚಾಗುವ ನಿರೀಕ್ಷೆ ಇತ್ತಾದರೂ, ಆ ಮಟ್ಟದಲ್ಲಿ ಇನ್ನೂ ಕಂಡುಬಂದಿಲ್ಲ. ಆದಾಗ್ಯೂ, ರಾಜ್ಯ ರಾಜಧಾನಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಬೆಂಗಳೂರಿನ ಗೊರಗುಂಟೆ ಪಾಳ್ಯದಲ್ಲಿ ರೈತರು ರಸ್ತೆ ತಡೆ ಪ್ರತಿಭಟನೆ ಆರಂಭಿಸಿದ್ದಾರೆ. ಈ ನಡುವೆ, ಕಳೆದ ನಾಲ್ಕೈದು ದಿನಗಳಿಂದ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರೂ ಬೀದಿಗಿಳಿಯುವ ನಿರೀಕ್ಷೆ ಇದ್ದು, ಪೊಲೀಸರು ಹೆಚ್ಚಿನ ನಿಗಾವಹಿಸಿದ್ದಾರೆ. ನಾಯಂಡಹಳ್ಳಿ ಜಂಕ್ಷನ್ ಮತ್ತು ಇತರೆ ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದು, ರಸ್ತೆ ತಡೆ ನಡೆಸದಂತೆ ಮುಂಜಾಗ್ರತಾ ಕ್ರಮವನ್ನು ತೆಗೆದುಕೊಂಡಿದ್ದಾರೆ.
ಜಿಲ್ಲಾವಾರು ವಿವರ ಗಮನಿಸಿ ಹೇಳುವುದಾದರೆ, ವಿಜಯಪುರದಲ್ಲಿ ಪೊಲೀಸರು ಶುಕ್ರವಾರದ ತರಕಾರಿ ಮಾರುಕಟ್ಟೆ ಬಂದ್ ಮಾಡಿಸಿದ್ದಾರೆ. ಹಳ್ಳಿಗಳಿಂದ ತರಕಾರಿ ಮಾರಾಟ ಮಾಡುವುದಕ್ಕೆ ಬಂದ ರೈತರನ್ನು ಮುಂಜಾಗ್ರತಾ ಕ್ರಮವಾಗಿ ವ್ಯಾಪಾರಕ್ಕೆ ಅವಕಾಶ ನೀಡದೇ ವಾಪಸ್ ಕಳುಹಿಸಿದ್ದಾರೆ. ಪೊಲೀಸರ ಈ ಕ್ರಮದ ಬಗ್ಗೆ ತರಕಾರಿ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯಾದಗಿರಿ, ಹುಬ್ಬಳಿ ಜಿಲ್ಲೆಗಳಲ್ಲಿ ಪ್ರತಿಭಟನೆಯ ತೀವ್ರತೆ ಕಂಡುಬಂದಿಲ್ಲ. ಸಾಂಕೇತಿಕ ಪ್ರತಿಭಟನೆ ನಡೆಸುವ ಸಿದ್ಧತೆಯಲ್ಲಿದ್ದಾರೆ ಈ ಜಿಲ್ಲೆಗಳಿನ ರೈತರು. ಉಳಿದ ಜಿಲ್ಲೆಗಳಲ್ಲೂ ರೈತರ ಪ್ರತಿಭಟನೆಯ ಕಾವು ಇದುವರೆಗೆ ಕಂಡುಬಂದಿಲ್ಲ.