ಚಿಕ್ಕಬಳ್ಳಾಪುರ: ನೂತನ ಕನ್ನಡ ಭವನ ಸಮೀಪದ ಬಸಪ್ಪನ ಛತ್ರದ ಕಲ್ಯಾಣಿಗೆ ನೀರಿಗೆ ಬಿದ್ದು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಗರದ ಕೋಟೆ ಬಡಾವಣೆಯ ವಿನಿತಾ (34) ಮೃತೆ. ನೀರಿನಲ್ಲಿ ಮೃತದೇಹ ಪತ್ತೆಯಾಗಿದ್ದು ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಭೇಟಿ ನೀಡಿ, ಪರಿಶೀಲಿಸಿದರು.
ವಂಚನೆಗೆ ಆತ್ಮಹತ್ಯೆ?
ನಿವೇಶನ ಕೊಡಿಸುವುದಾಗಿ ಹೇಳಿ ಯುವಕನೊಬ್ಬ 20 ಲಕ್ಷ ರೂ ಪಡೆದುಕೊಂಡು ವಂಚಿಸಿರುವುದೇ ಗೃಹಿಣಿ ಆತ್ಮಹತ್ಯೆಗೆ ಕಾರಣ ಎಂಬ ಮಾಹಿತಿ ಲಭ್ಯವಾಗಿದೆ. ಅಡುಗೆ ತಯಾರಿಕೆಯ ವೃತ್ತಿಯಲ್ಲಿ ಕಟ್ಟಿದ್ದ ಚೀಟಿ ಹಣವನ್ನು ವಿಕ್ಕಿ ಎಂಬಾತನಿಗೆ ನಿವೇಶನಕ್ಕಾಗಿ ನೀಡಲಾಗಿತ್ತು. ಆತ ನಕಲಿ ಕರಾರುಪತ್ರ ನೀಡಿ ವಂಚಿಸಿದ್ದ. ಹಣ ಕೇಳಿದರೂ ವಾಪಸ್ ಕೊಡುತ್ತಿರಲಿಲ್ಲ. ಇದರಿಂದ ಮನನೊಂದು ಕಲ್ಯಾಣಿ ನೀರಿಗೆ ಬಿದ್ದು ವಿನಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದೇಳಲಾಗುತ್ತಿದೆ.