

ಪಡುಬಿದ್ರಿ: ಕಾಪು ತಾಲೂಕಿನಲ್ಲಿ ಶುಕ್ರವಾರ ನೆರೆ ಪ್ರಮಾಣ ಹೆಚ್ಚಾಗಿ ಹಲವಾರು ಕಡೆ ಮನೆಗಳು ಜಲಾವೃತವಾಗಿದ್ದು 5 ಗ್ರಾಮಗಳಲ್ಲಿ ಸಂಕಷ್ಟಕ್ಕೀಡಾದವರನ್ನು ತಹಸೀಲ್ದಾರ್ ಪ್ರತಿಭಾ ಆರ್. ನೇತೃತ್ವದಲ್ಲಿ ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು.
ಶುಕ್ರವಾರ ಮುಂಜಾನೆ 5.30ರಿಂದಲೇ ತಹಸೀಲ್ದಾರ್, ಕಂದಾಯ ನಿರೀಕ್ಷಕರು ಹಾಗೂ ಗ್ರಾಮಾಡಳಿತಾಧಿಕಾರಿಗಳು ಗೃಹರಕ್ಷಕ ಸಿಬ್ಬಂದಿ ರಕ್ಷಣಾ ತಂಡದೊಂದಿಗೆ ನೆರೆಯಿಂದ ಸಂಕಷ್ಟಕ್ಕೊಳಗಾದ ಗ್ರಾಮಗಳಲ್ಲಿನ ಮನೆಗಳಿಗೆ ತೆರಳಿ ಅವರ ಮನವೊಲಿಸಿ ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ಸ್ಥಳಾಂತರಿಸಿದರು.
ಪಡುಬಿದ್ರಿ ಪಾದೆಬೆಟ್ಟು, ನಡ್ಸಾಲು ಗ್ರಾಮದ ಕಲ್ಲಟ್ಟೆ, ಹೆಜಮಾಡಿ ಗ್ರಾಮದ ಶಿವನಗರ, ಕಟಪಾಡಿ ಗ್ರಾಮದಲ್ಲಿ ಸಂಕಷ್ಟದಲ್ಲಿದ್ದ ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ತಾಲೂಕಿನ 30 ಗ್ರಾಮಗಳಲ್ಲಿಯೂ ಸಕಲ ವ್ಯವಸ್ಥೆಗಳೊಂದಿಗೆ 30 ಕಾಳಜಿ ಕೇಂದ್ರ ತೆರೆಯಲಾಗಿದ್ದು, ಸ್ಥಳಾಂತರಿಸಿರುವ ಯಾರೊಬ್ಬರೂ ಕಾಳಜಿ ಕೇಂದ್ರಕ್ಕೆ ಬರಲೊಪ್ಪಲಿಲ್ಲ. ಅವರೆಲ್ಲರನ್ನು ಸಂಬಂಧಿಕರ ಮನೆಗೆ ಸುರಕ್ಷಿತವಾಗಿ ತಲುಪಿಸುವ ಕಾರ್ಯವನ್ನೂ ತಾಲೂಕು ಆಡಳಿತ ಮಾಡಿದೆ. ರಾತ್ರಿ 12 ಗಂಟೆಯಿಂದಲೇ ತಂಡ ಸನ್ನದ್ಧವಾಗಿದ್ದು, ಮುಂಜಾನೆ ಬೆಳಕು ಹರಿಯುವ ಹೊತ್ತಿಗೆ ಕರೆ ಬಂದೆಡೆ ತೆರಳಿ ಕಾರ್ಯಾಚರಣೆ ಆರಂಭಿಸಲಾಗಿದೆ. ಸಾರ್ವಜನಿಕರು ನೆರೆ ಸಂಕಷ್ಟದ ಸಂದರ್ಭದಲ್ಲಿ ತಾಲೂಕು ಕೇಂದ್ರದ ಸಹಾಯವಾಣಿ ಸಂಖ್ಯೆ 0820 2551444 ಕರೆ ಮಾಡಬಹುದು ಎಂದು ತಹಸೀಲ್ದಾರ್ ಪ್ರತಿಭಾ ತಿಳಿಸಿದ್ದಾರೆ.