

ಗಂಗೊಳ್ಳಿ: ಶುಕ್ರವಾರ ಮಳೆಯಬ್ಬರ ಮುಂದುವರಿದಿದ್ದು, ಗಾಳಿ-ಮಳೆಗೆ ಹಲವೆಡೆ ಮನೆ, ಜಾನುವಾರು ಕೊಟ್ಟಿಗೆಗಳಿಗೆ ಹಾನಿಯಾಗಿದೆ. ಅಪಾರ ಪ್ರಮಾಣದ ಗದ್ದೆಗಳು ಮುಳುಗಡೆಯಾಗಿವೆ. ಗಂಗೊಳ್ಳಿ ಗ್ರಾಮದ ಮಲ್ಯರಬೆಟ್ಟುವಿನ ರೇಖಾ ಖಾರ್ವಿ ಮನೆಗೆ ಹಾನಿಯಾಗಿದ್ದು, ನೆರೆ ನೀರು ನುಗ್ಗಿದೆ. ಕಟ್ಬೆಲ್ತೂರು ಗ್ರಾಮದ ರಘುರಾಮ ಶೆಟ್ಟರ ಮನೆಗೆ ತೆಂಗಿನಮರ ಬಿದ್ದು, ಮನೆ ಹಾಗೂ ಸೋಲಾರ್ಗೆ ಹಾನಿಯಾಗಿದೆ. ರುದ್ರಮ್ಮ ಶೆಡ್ತಿಯವರ ದನದ ಕೊಟ್ಟಿಗೆಗೆ ಹಾನಿಯಾಗಿದೆ. ಬಸ್ರೂರು ಗ್ರಾಮದ ಮೂಡ್ಕೇರಿಯ ಮೀರಾ ಹಾಗೂ ಸೇನಾಪುರ ಗ್ರಾಮದ ಲೆಸ್ಲಿ ಸುನೀಲ್ ಕುಮಾರ್, ಹಕ್ಲಾಡಿ ಗ್ರಾಮದ ಕೆಳಾಕಳಿ ಬಸವ ಪಿ.ಮೊಗವೀರ, ಚಿಲ್ಲರಬೈಲು ಚಂದ್ರಶೇಖರ್ ಗಾಣಿಗ, ಆನಗಳ್ಳಿಯ ಲಾರೆನ್ಸ್ ಬರೆಟ್ಟೋ ಹಾಗೂ ಹೆಮ್ಮಾಡಿ ಗ್ರಾಮದ ಬಾಬುರವರ ಮನೆ ಮೇಲೆ ಮರ ಬಿದ್ದು ಅಪಾರ ಹಾನಿಯಾಗಿ ನಷ್ಟ ಸಂಭವಿಸಿದೆ.
ಹಕ್ಲಾಡಿ ಗ್ರಾಮದ ಯಳೂರಿನ ಮೂಕಾಂಬು ಶೆಡ್ತಿ ತೋಟದ 5 ಅಡಕೆ ಮರ ಹಾಗೂ 1 ತೆಂಗಿರ ಮರ ಗಾಳಿ, ಮಳೆಗೆ ಮುರಿದು ಬಿದ್ದಿದೆ. ಕಾವ್ರಾಡಿ ಗ್ರಾಮದ ರಾಮ ಮಂದಿರ ರಸ್ತೆ ಮಂಜುನಾಥ ಮೊಗವೀರರ ಮನೆ ಬಳಿ ನೀರು ಹೋಗುವ ತೋಡನ್ನು ಪಕ್ಕದ ಮನೆಯವರು ಅಡ್ಡಗಟ್ಟಿ ಕೃತಕ ನೆರೆ ಸೃಷ್ಟಿಯಾಗಿದ್ದು, ಅಲ್ಲಿಗೆ ಭೇಟಿ ನೀಡಿ, ಪರಿಶೀಲಿಸಿದ ಕುಂದಾಪುರ ತಹಸೀಲ್ದಾರ್ ಶೋಭಾಲಕ್ಷ್ಮೀ ಗ್ರಾಪಂ ಅಧಿಕಾರಿಗಳ ಸಮ್ಮುಖದಲ್ಲಿ ತೆರವು ಮಾಡಿ, ನೀರು ಹರಿದು ಹೋಗಲು ಅನುವು ಮಾಡಿಕೊಟ್ಟರು.