ಹಲವೆಡೆ ಮನೆಗಳು ಜಲಾವೃತ

31NGD3
Published on

ನಂಜನಗೂಡು: ಕಬಿನಿ ಜಲಾಶಯದಿಂದ 80 ಸಾವಿರ ಕ್ಯೂಸೆಕ್ ನೀರು ಹರಿಸಿದ ಪರಿಣಾಮ ತಾಲೂಕಿನ ಹಲವೆಡೆ ಮನೆಗಳು ಜಲಾವೃತಗೊಂಡು ನಿವಾಸಿಗಳು ಪರಿತಪಿಸುವಂತಾಗಿದೆ. ನದಿಯ ಪ್ರವಾಹ ಹೆಚ್ಚಾಗಿ ಮಲ್ಲನಮೂಲೆ ಮಠದ ಬಳಿ ನಂಜನಗೂಡು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ಆವರಿಸಿಕೊಂಡಿದ್ದರಿಂದ ಬುಧವಾರ ದಿನವಿಡೀ ಸಂಚಾರ ಅಸ್ತವ್ಯಸ್ತಗೊಂಡಿತು.


ನಂಜನಗೂಡಿನಿಂದ ಮೈಸೂರು ಕಡೆಗೆ ತೆರಳಲು ಕೈಗಾರಿಕಾ ಪ್ರದೇಶ ಮಾರ್ಗವಾಗಿ ಕಲ್ಲಹಳ್ಳಿ, ಮರಳೂರು ಗೊದ್ದನಪುರ ಸೇತುವೆ ಮಾರ್ಗವಾಗಿ ತಾಂಡವಪುರ ಮೂಲಕ ಮುಖ್ಯ ರಸ್ತೆಗೆ ಸೇರಲು ಬದಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಮೈಸೂರಿನಿಂದ ನಂಜನಗೂಡು ಮಾರ್ಗವಾಗಿ ಬರಲು ಚಿಕ್ಕಯ್ಯನ ಛತ್ರದಿಂದ ಕೆಂಪಿಸಿದ್ದನಹುಂಡಿ, ಬಸವನಪುರ ಮಾರ್ಗವಾಗಿ ಮುಖ್ಯ ರಸ್ತೆಗೆ ಸೇರಲು ಬದಲಿ ಮಾರ್ಗ ಕಲ್ಪಿಸಲಾಗಿತ್ತು. ಮೈಸೂರು-ನಂಜನಗೂಡು ಮಾರ್ಗವಾಗಿ ಬದಲಿ ವ್ಯವಸ್ಥೆ ಕಲ್ಪಿಸಿದರೂ ವಾಹನ ಸವಾರರು ಪರದಾಡುವಂತಾಯಿತು. ಇನ್ನು ತಮಿಳುನಾಡು, ಕೇರಳ ಕಡೆ ತೆರಳುವ ಪ್ರಯಾಣಿಕರಿಗಂತೂ ಸಂಚಾರ ಬಿಸಿ ತಟ್ಟಿತು.


ಮಲ್ಲನಮೂಲೆ ಗುರುಕಂಬಳೀಶ್ವರ ಮಠ ಜಲಾವೃತಗೊಂಡು ಹೆದ್ದಾರಿಯ ಇಕ್ಕೆಲಗಳಲ್ಲಿ ನೀರು ಆವರಿಸಿಕೊಂಡಿದ್ದರಿಂದ ಅತ್ತ ಜನರು ಸುಳಿಯದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಇತ್ತ ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಕಪಿಲಾ ಸ್ನಾನಘಟ್ಟ ಸಮೀಪದಲ್ಲಿ ಪ್ರವಾಹ ಚರಂಡಿ ಮಾರ್ಗ ಹಾಗೂ ಗುಂಡ್ಲು ನದಿ ಮೂಲಕ ಹಿಮ್ಮುಖವಾಗಿ ಹರಿದ ಪರಿಣಾಮ ದಾಸೋಹ ಭವನ, ಭಕ್ತಿಮಾರ್ಗ, ಡಾರ್ಮೆಟರಿ, ಪಾರ್ಕಿಂಗ್ ಸ್ಥಳಗಳು ಜಲಾವೃತಗೊಂಡಿದ್ದವು. ಪರಶುರಾಮ ದೇವಾಲಯ ಭಾಗಶಃ ಮುಳುಗಡೆಗೊಂಡಿತ್ತು. ಅಯ್ಯಪ್ಪಸ್ವಾಮಿ, ಚಾಮುಂಡೇಶ್ವರಿ ದೇವಾಲಯ ಆವರಣ, ಲಿಂಗಣ್ಣ ಛತ್ರ, ಮುಡಿಕಟ್ಟೆ ಜಲಾವೃತಗೊಂಡಿದೆ.


ಬಡಾವಣೆಗಳಿಗೆ ನೀರು: 10 ದಿನಗಳ ಹಿಂದಷ್ಟೆ ಕಪಿಲಾ ನದಿ ಪ್ರವಾಹಕ್ಕೆ ಸಿಲುಕಿದ್ದ ಬಡಾವಣೆಗಳ ಮನೆಗಳು ಮತ್ತೆ ಎರಡನೇ ಬಾರಿ ಜಲಾವೃತಗೊಂಡಿವೆ. ನಗರದ ಹಳ್ಳದಕೇರಿ, ತೋಪಿನ ಬೀದಿ, ಕುರುಬಗೇರಿ, ಬೊಕ್ಕಹಳ್ಳಿ, ಹುಲ್ಲಹಳ್ಳಿಯ ಪೌರಕಾರ್ಮಿಕ ಬಡಾವಣೆ ಸೇರಿದಂತೆ ನೂರಾರು ಮನೆಗಳು ಜಲಾವೃತಗೊಂಡು ಗೃಹೋಪಯೋಗಿ ವಸ್ತುಗಳು ನಾಶಗೊಂಡಿವೆ. ಜು.19ರಂದು ನದಿಗೆ ಹೆಚ್ಚು ನೀರು ಹರಿಸಿದ್ದರಿಂದ ಈ ಬಡಾವಣೆಗಳಲ್ಲಿ ಮನೆಗಳು ಜಲಾವೃತಗೊಂಡಿದ್ದವು. ಇದರಿಂದ ಚೇತರಿಸಿಕೊಳ್ಳುವಷ್ಟರಲ್ಲೇ ಮತ್ತೆ ಪ್ರವಾಹ ಎದುರಾಗಿ ಗಾಯದ ಮೇಲೆ ಬರೆ ಎಳೆದಂತಾಗಿದ್ದು ನಿವಾಸಿಗಳು ತತ್ತರಿಸಿ ಹೋಗಿದ್ದಾರೆ. ನಿರಾಶ್ರಿತರೆಲ್ಲರಿಗೂ ಕಾಳಜಿ ಕೇಂದ್ರ ತೆರೆದು ಆಶ್ರಯ ನೀಡಲಾಗಿದೆ.


ಸುತ್ತೂರು ಸೇತುವೆ ಜಲಾವೃತ: ತಾಲೂಕಿನ ಸುತ್ತೂರು ಗ್ರಾಮ ಪ್ರವೇಶಿಸುವ ಕಪಿಲಾ ನದಿ ಸೇತುವೆ ಸಂಪೂರ್ಣ ಜಲಾವೃತಗೊಂಡು ಮೈಸೂರು ಮಾರ್ಗ ಸಂಪರ್ಕ ಕಡಿತವಾಗಿದೆ. ಇದರಿಂದಾಗಿ ಮೈಸೂರು ಕಡೆಯಿಂದ ಸಾರಿಗೆ ಸಂಪರ್ಕ ಮೊಟಕಾಗಿದ್ದರಿಂದ ಸ್ಥಳೀಯರಿಗೆ ತೊಂದರೆಯಾಯಿತು.
ಕೈಕಟ್ಟಿ ಕುಳಿತ ರೈತರು: ಕಪಿಲಾ ನದಿ ಪ್ರವಾಹ ಹೆಚ್ಚಾಗಿರುವುದರಿಂದ ನದಿ ಪಾತ್ರದ ಅಚ್ಚುಕಟ್ಟು ಪ್ರದೇಶದಲ್ಲಿ ರೈತರು ಬೆಳೆದಿದ್ದ ಫಸಲು ಪ್ರವಾಹಕ್ಕೆ ಕೊಚ್ಚಿ ಹೋಗಿವೆ. ನಾಲೆಗಳಿಗೆ ನೀರು ಹರಿಸಿದ್ದರಿಂದ ನದಿ ಸುತ್ತಮುತ್ತಲಿನ ಜಮೀನಿನಲ್ಲಿ ರೈತರು ಭತ್ತ, ರಾಗಿ ಬಿತ್ತನೆಗೆ ಉಳುಮೆ ಮಾಡಿ ಹದಗೊಳಿಸುವ ಜತೆಗೆ ಪೈರಿಗಾಗಿ ಬಿತ್ತನೆಯನ್ನೂ ಮಾಡಿದ್ದರು. ಇದೀಗ ಎಲ್ಲವೂ ಪ್ರವಾಹಕ್ಕೆ ಕೊಚ್ಚಿ ಹೋಗಿರುವುದರಿಂದ ರೈತರು ಕೈಕಟ್ಟಿ ಕೂರುವಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net