ಕಾರ್ಕಳ ತಾಲೂಕಾದ್ಯಂತ ಗಾಳಿ ಸಹಿತ ಮಳೆಗೆ ಮರಬಿದ್ದು ಮನೆ ಹಾನಿ

manege mara
ಕುಕ್ಕುಂದೂರು ಗ್ರಾಮದ ಅಯ್ಯಪ್ಪ ನಗರ ಎಂಬಲ್ಲಿನ ಅಂಗನವಾಡಿ ಕೇಂದ್ರದ ಕಟ್ಟಡ ಮೇಲೆ ಗಾಳಿಯ ರಭಸಕ್ಕೆ ಬೃಹತ್ ಗಾತ್ರದ ಮರ ಬಿದ್ದು ಹಾನಿಯಾಗಿರುವುದು
Published on

ವಿಜಯವಾಣಿ ಸುದ್ದಿಜಾಲ ಕಾರ್ಕಳ

ಬುಧವಾರ ರಾತ್ರಿ ಹಾಗೂ ಗುರುವಾರ ಕಾರ್ಕಳ ತಾಲೂಕಾದ್ಯಂತ ಗಾಳಿ ಸಹಿತ ಉತ್ತಮ ಮಳೆಯಾಗಿದ್ದು ಹಲವೆಡೆ ಮರಬಿದ್ದು ಹಾನಿಯುಂಟಾಗಿದೆ.
ಕುಕ್ಕುಂದೂರು ಗ್ರಾಮದ ಅಯ್ಯಪ್ಪ ನಗರ ಎಂಬಲ್ಲಿನ ಅಂಗನವಾಡಿ ಕೇಂದ್ರದ ಕಟ್ಟಡ ಮೇಲೆ ಗಾಳಿ ರಭಸಕ್ಕೆ ಬೃಹತ್ ಗಾತ್ರದ ಮರವೊಂದು ಉರುಳಿ ಬಿದ್ದ ಪರಿಣಾಮ ಕಟ್ಟಡಕ್ಕೆ ಹಾನಿಯುಂಟಾಗಿದೆ. ಅಂಗನವಾಡಿ ಕೇಂದ್ರದಲ್ಲಿ ಮಕ್ಕಳು ಇಲ್ಲದ ಸಂದರ್ಭದಲ್ಲಿ ಮರ ಬಿದ್ದ ಪರಿಣಾಮ ಭಾರಿ ಅನಾಹುತ ತಪ್ಪಿದೆ. ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯರ ಸಹಕಾರದಲ್ಲಿ ಮರ ತೆರವುಗೊಳಿಸಲಾಯಿತು. ಘಟನಾ ಸ್ಥಳಕ್ಕೆ ಗ್ರಾಮಕರಣಿಕರು ಭೇಟಿ ನೀಡಿದ್ದಾರೆ.

ರೆಂಜಾಳ ಗ್ರಾಮದ ಅಂಗಡಿ ಬಾಕ್ಯಾರು ಎಂಬಲ್ಲಿ ನಿವಾಸಿ ಸುಪ್ರಿಯಾ ದೇವಾಡಿಗ ಎಂಬುವರ ವಾಸ್ತವ್ಯದ ಮನೆ ಮೇಲೆ ಬುಧವಾರ ಮರ ಬಿದ್ದು ಅಪಾರ ಪ್ರಮಾಣದಲ್ಲಿ ಹಾನಿಯುಂಟಾಗಿದೆ. ಗುರುವಾರ ಬೆಳಗ್ಗೆ ಸುರಿದ ಭಾರಿ ಗಾಳಿ ಮಳೆಗೆ ನಿಟ್ಟೆ ಗ್ರಾಮದ ಮರಿಪರಪು ಪಾದೆ ಎಂಬಲ್ಲಿ ತೆಂಗಿನ ಮರ ಬಿದ್ದು ಮನೆಗಳಿಗೆ, ವಿದ್ಯುತ್ ಕಂಬಕ್ಕೆ ಹಾನಿಯಾಗಿದೆ. ನಿಟ್ಟೆ ಗ್ರಾಮದ ಸರೋಜಿನಿ, ಬಾನುಮತಿ, ಹಂಸ, ಬೇಬಿ, ನಿಟ್ಟೆ ಗ್ರಾಮ ನಿವಾಸಿ ಲೀಲಾ ಮೂಲ್ಯ ಎಂಬುವರ ಮನೆಯ ಮೇಲೆ ಮರ ಬಿದ್ದು ನಷ್ಟ ಉಂಟಾಗಿದೆ. ಘಟನಾ ಸ್ಥಳಕ್ಕೆ ಕಾರ್ಕಳ ತಹಸೀಲ್ದಾರ್ ನರಸಪ್ಪ, ಗ್ರಾಮಕರಣಿಕ ಸುಕೇಶ್ ಮತ್ತಿತರರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net