

ಯಳಂದೂರು: ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾವುದವಾಡಿ ಗ್ರಾಮದಲ್ಲಿ ಬುಧವಾರ ರಾತ್ರಿ ಸುರಿದ ಮಳೆಯಿಂದ ಮನೆ ಗೋಡೆ ಕುಸಿದು ಬಿದ್ದಿದೆ.
ಕಾವುದವಾಡಿ ಗ್ರಾಮದ ವನಜಾಕ್ಷಮ್ಮ-ಶಿವಣ್ಣ ಅವರ ಮನೆ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಮನೆಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿರುವ ಶಿವಣ್ಣ ಕುಟುಂಬ ಇದೀಗ ಉಳಿದುಕೊಳ್ಳಲು ಸೂರಿಲ್ಲದಂತಾಗಿದೆ. ಈಗಾಗಲೇ ಒಂದು ಭಾಗದ ಗೋಡೆ ಕುಸಿದಿದ್ದು, ಮತ್ತೊಂದು ಭಾಗದ ಗೋಡೆಯು ಬೀಳುವ ಹಂತಕ್ಕೆ ತಲುಪಿದೆ. ಘಟನೆಯಿಂದ ಮನೆಯಲ್ಲಿದ್ದ ವಸ್ತುಗಳೆಲ್ಲ ನಾಶವಾಗಿದ್ದು, ಸ್ಥಳಕ್ಕೆ ಸಂತೇಮರಹಳ್ಳಿ ಗ್ರಾ.ಪಂ. ಪಿಡಿಒ ಮಮತಾ, ಗ್ರಾಮ ಲೆಕ್ಕಾಧಿಕಾರಿ ಸಾನಿಯಾ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸೂಕ್ತ ಪರಿಹಾರಕ್ಕೆ ಶಿವಣ್ಣ ಕುಟುಂಬಸ್ಥರು ಒತ್ತಾಯಿಸಿದ್ದಾರೆ.