ಮನೆಯ ಗೋಡೆ ಕುಸಿತ : ಬಡ ಕುಟುಂಬದ ಸ್ಥಿತಿ ಅತಂತ್ರ

house wall
ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಬಡ ಕುಟುಂಬದ ಮನೆಯ ಗೋಡೆ ಕುಸಿದು ಬಿದ್ದಿದೆ.
Published on

ಪುತ್ತೂರು ಗ್ರಾಮಾಂತರ: ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಬಡ ಕುಟುಂಬವೊಂದರ ಮನೆಯ ಗೋಡೆ ಕುಸಿದು ಬಿದ್ದ ಘಟನೆ ಅರಿಯಡ್ಕ ಗ್ರಾಮದ ಶಾಂತಿಮೂಲೆ ಎಂಬಲ್ಲಿ ನಡೆದಿದ್ದು, ಇದರಿಂದಾಗಿ ಕುಟುಂಬದ ಸ್ಥಿತಿ ಅತಂತ್ರವಾಗಿದೆ.

ಅರಿಯಡ್ಕ ಗ್ರಾಮದ ಪೈಲಕಲ್ಲು ಸಮೀಪದ ಶಾಂತಿಮೂಲೆ ನಿವಾಸಿ ಈಶ್ವರ ನಾಯ್ಕ ಅವರ ಪತ್ನಿ ಕಮಲ ಅವರ ಹಂಚಿನ ಮನೆಯ ಇಟ್ಟಿಗೆ ಗೋಡೆ ಕುಸಿದು ಬಿದ್ದಿದ್ದು, ಮಾಡು ಕುಸಿದು ಬೀಳುವ ಹಂತಕ್ಕೆ ತಲುಪಿದೆ. ಮಾಡು ತೀರಾ ಶಿಥಿಲಾವಸ್ಥೆಯಲ್ಲಿತ್ತು. ಈ ಹಿನ್ನೆಲೆಯಲ್ಲಿ ಅರಿಯಡ್ಕ ಗ್ರಾಮ ಪಂಚಾಯಿತಿ ಕಳೆದ ಸಾಲಿನಲ್ಲಿ ಮನೆ ದುರಸ್ತಿಗೆ ಹಣ ಬಿಡುಗಡೆ ಮಾಡಿದ್ದರೂ ಅನಾರೋಗ್ಯದ ಹಿನ್ನೆಲೆಯಲ್ಲಿ ಅವರು ದುರಸ್ತಿ ಕಾರ್ಯ ಮಾಡಿರಲಿಲ್ಲ. ಹಾಗಾಗಿ ಕಳೆದ ಕೆಲ ದಿನಗಳಿಂದ ಸುರಿದ ಮಳೆಯಿಂದಾಗಿ ನೀರು ಸೋರಿಕೆಯಾಗಿ ಗೋಡೆ ಕುಸಿದಿದೆ.

ಅರಿಯಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ, ಸದಸ್ಯ ನಾರಾಯಣ ನಾಯ್ಕ ಚಾಕೋಟೆ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುನೀಲ್‌ಕುಮಾರ್, ಕಾರ್ಯದರ್ಶಿ ಶಿವರಾಮ ಮೂಲ್ಯ, ಗ್ರಾಮ ಆಡಳಿತಾಧಿಕಾರಿ ಗೋಪಿಲಾಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅರಿಯಡ್ಕ ಪಂಚಾಯಿತಿ ವತಿಯಿಂದ ಮನೆಯ ಮಾಡಿಗೆ ಟಾರ್ಪಾಲ್ ಹೊದಿಕೆಯ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಡಲಾಗಿದೆ.

ಕಮಲಾ ಅನಾರೋಗ್ಯ ಪೀಡಿತೆ

ಕಮಲಾ ಅವರದ್ದು ತೀರಾ ಬಡ ಕುಟುಂಬವಾಗಿದ್ದು, ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಈಗ ಅವರ ಮನೆಯೂ ಕುಸಿದಿದ್ದು, ಈ ಕುಟುಂಬ ಈಗ ಸಂಬಂಧಿಕರೊಬ್ಬರ ಮನೆಯನ್ನು ಆಶ್ರಯಿಸಬೇಕಾದ ಸ್ಥಿತಿ ಉಂಟಾಗಿದೆ. ಈ ಕುಟುಂಬಕ್ಕೆ ನೆರವಾಗುವ ಹಿನ್ನೆಲೆಯಲ್ಲಿ ಕೆಯ್ಯೂರು ಗ್ರಾಪಂ ಅಧ್ಯಕ್ಷ ಶರತ್ ಮಾಡಾವು ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net