ವ್ಯಕ್ತಿಯೊಬ್ಬನಿಗೆ ಥಳಿಸುತ್ತ ಮಹಡಿ ಮೇಲಿಂದ ಕೆಳಕ್ಕೆ ಬೀಳಿಸಲು ಯತ್ನ; ಅಮಾನವೀಯ ವರ್ತನೆಯ ದೃಶ್ಯ ವೈರಲ್​

Feature
Published on

ಬೆಳಗಾವಿ: ವ್ಯಕ್ತಿಯೊಬ್ಬನಿಗೆ ಮನೆಯೊಂದರ ಸದಸ್ಯರು ಥಳಿಸಿದ್ದಲ್ಲದೆ ಮಹಡಿಯಿಂದ ಕೆಳಕ್ಕೆ ಬೀಳಿಸಲು ಯತ್ನಿಸಿದ ಅಮಾನವೀಯ ಪ್ರಕರಣವೊಂದು ನಡೆದಿದ್ದು, ಈ ಕೃತ್ಯದ ವಿಡಿಯೋ ವೈರಲ್ ಆಗಿದೆ. ಬೆಳಗಾವಿಯ ಹೃದಯಭಾಗದಲ್ಲಿರುವ ಕಡೋಲ್ಕರ್ ಗಲ್ಲಿಯಲ್ಲಿ ಈ ಪ್ರಕರಣ ನಡೆದಿದೆ.

ಯುವಕನೊಬ್ಬ ಮೊದಲ ಮಹಡಿಯ ಬಾಲ್ಕನಿಯ ಹೊರಗೆ ಬೀಳುವ ರೀತಿಯಲ್ಲಿ ನೇತಾಡುತ್ತಿದ್ದರೂ ಮನೆಯ ಸದಸ್ಯರು ಥಳಿಸಿ, ಆತ ಕೈ ಬಿಟ್ಟು ಕೆಳಕ್ಕೆ ಬೀಳುವಂತೆ ಮಾಡುವ ಪ್ರಯತ್ನದಲ್ಲಿದ್ದರು. ಹೀಗೆ ಹಿಂಸೆ ಕೊಡುತ್ತಿದ್ದುದಕ್ಕೆ ಭಯದಿಂದ ಆತ ರಕ್ಷಣೆ ಕೋರಿ ಸಹಾಯಕ್ಕಾಗಿ ಕೂಗಿಕೊಂಡಿದ್ದಾನೆ.

ವ್ಯಕ್ತಿಯ ಚೀರಾಟ ನೋಡಿ ಒಂದಷ್ಟು ಸ್ಥಳೀಯರು ಸ್ಥಳದಲ್ಲಿ ಜಮಾವಣೆ ಆಗುತ್ತಿದ್ದಂತೆ ತಮ್ಮ ಕೃತ್ಯದಿಂದ ಹಿಂಜರಿದ ಮನೆಯವರು ಥಳಿಸುವುದನ್ನು ನಿಲ್ಲಿಸಿದ್ದರು. ಪರಿಣಾಮವಾಗಿ ಆ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಹೀಗೆ ಥಳಿಸಲಾಗಿದೆ ಎನ್ನಲಾಗುತ್ತಿದ್ದು, ಈ ಕುರಿತು ನಿಖರ ಮಾಹಿತಿ ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ. ಬೆಳಗಾವಿ ಖಡೇಬಜಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಈ ಘಟನೆ ಕುರಿತ ವಿಡಿಯೋ ವೈರಲ್ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net