

ಮೂಡುಬಿದಿರೆ: ಮನುಷ್ಯತ್ವವೇ ಧರ್ಮ ಎಂಬ ಧ್ಯೇಯ ವಾಕ್ಯ ನಮ್ಮ ತಂಡದ್ದು. ಹೆಲ್ಪಿಂಗ್ ಫ್ರೆಂಡ್ಸ್ ಇಸ್ರೇಲ್ ತಂಡ ಕಳೆದ ಎಂಟು ವರ್ಷಗಳಿಂದ 1 ಕೋಟಿ ರೂ.ಗೂ ಅಧಿಕ ಮೊತ್ತದ ಹಣ ಸಂಗ್ರಹಿಸಿ ಸಮಾಜದ ಆಶಕ್ತರಿಗೆ, ನಿರ್ವಸಿತರಿಗೆ, ವಿದ್ಯಾರ್ಥಿಗಳಿಗೆ, ಅನಾರೋಗ್ಯ ಪೀಡಿತರಿಗೆ ಸಹಾಯ ಹಸ್ತ ನೀಡುತ್ತಿದೆ. ಸಮಾಜದ ಸಹಕಾರವಿದ್ದಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ಹಲವಾರು ಸಮಾಜಮುಖಿ ಕಾರ್ಯ ಮಾಡುವ ಉದ್ದೇಶ ತಂಡಕ್ಕಿದೆ ಎಂದು ಸಂಘಟನೆಯ ಸಂಸ್ಥಾಪಕ ಸುನೀಲ್ ಮೆಂಡೋನ್ಸ ತಿಳಿಸಿದರು.
ಅನಾರೋಗ್ಯವಿದ್ದರೂ ಟೈಲರಿಂಗ್ ವೃತ್ತಿ ಮಾಡಿಕೊಂಡು, ತಾಕೋಡೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯವಿದ್ದ ಲಾರೆನ್ಸ್ ಫೆಬಿಯೋಲಾ ಮೆಂಡೋನ್ಸಾ ಅವರಿಗೆ ಸ್ವಂತ ಮನೆಯ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹೊಸಬೆಟ್ಟು ಚರ್ಚ್‌ನ ಧರ್ಮಗುರು ಗ್ರೇಗರಿ ಡಿಸೋಜ, ತಾಕೋಡೆ ಚರ್ಚ್‌ನ ಧರ್ಮಗುರು ರೋಹನ್ ಲೋಬೊ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.
ಹ್ಯುಮಾನಿಟಿ ಸಂಸ್ಥೆಯ ಸಂಸ್ಥಾಪಕ ರೋಷನ್ ಬೆಳ್ಮಣ್, ಸ್ಫೂರ್ತಿ ಭಿನ್ನ ಸಾಮರ್ಥ್ಯದ ಮಕ್ಕಳ ಶಾಲೆಯ ಸಂಸ್ಥಾಪಕ ಪ್ರಕಾಶ್ ಶೆಟ್ಟಿಗಾರ್, ಮೂಡುಬಿದಿರೆ ವಲಯದ ಕಥೋಲಿಕ್ ಸಭಾ ವಲಯ ಅಧ್ಯಕ್ಷ ಆಲ್ವಿನ್ ರೋಡ್ರಿಗಸ್, ವಕೀಲ ನಾಗೇಶ್ ಶೆಟ್ಟಿ ಮತ್ತಿತರರಿದ್ದರು. ತಂಡದ ಕಾರ್ಯದರ್ಶಿ ಲೆತ್ತಿಶಿಯ ಗೊಮ್ಸ್ ಲೆಕ್ಕಪತ್ರ ಮಂಡಿಸಿದರು.