ಪರಿಶ್ರಮಯುತ ಸಾಧನೆ ಉಜ್ವಲ ಭವಿಷ್ಯಕ್ಕೆ ಅಡಿಗಲ್ಲು : ಹರೀಶ್ ಎಸ್.ಇಂಜಾಡಿ ಅನಿಸಿಕೆ

New Project (25)
Published on

ಸುಬ್ರಹ್ಮಣ್ಯ: ಸಾಧನೆ ಎಂಬುದು ಹಂತ ಹಂತವಾಗಿ ನಡೆಯುವ ಪ್ರಕ್ರಿಯೆ. ಧೃತಿಗೆಡದೆ ಯಶಸ್ಸಿನತ್ತ ಮುನ್ನಡೆದು ವಿದ್ಯಾಲಯಕ್ಕೆ ಕೀರ್ತಿ ತಂದು ಭವಿಷ್ಯದಲ್ಲಿ ಪ್ರಗತಿಯ ಗುರಿಯತ್ತ ಮುನ್ನುಗ್ಗಬೇಕು. ಪರಿಶ್ರಮಯುತ ಸಾಧನೆಯು ಉಜ್ವಲ ಭವಿಷ್ಯದ ಔನ್ನತ್ಯಕ್ಕೆ ಅಡಿಗಲ್ಲು ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಎಸ್.ಇಂಜಾಡಿ ಹೇಳಿದರು.

ಸುಬ್ರಹ್ಮಣ್ಯದ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಮಂಗಳವಾರ ಆಯೋಜಿಸಲಾದ ಅಭಿನಂದನಾ ಕಾರ್ಯಕ್ರಮ ಮತ್ತು ಶಿಕ್ಷಕ-ರಕ್ಷಕ ಸಂಘದ ಸಭೆ ಉದ್ಘಾಟಿಸಿ ಮಾತನಾಡಿದರು.

ಎಸ್‌ಎಸ್‌ಎಲ್‌ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಶಾಲೆಗೆ ಶೇ.100 ಫಲಿತಾಂಶ ದಾಖಲಾಗಿದ್ದು, ವಿಶಿಷ್ಟ ಶ್ರೇಣಿ ಪಡೆದ ಭವಿಷ್ ಕುಮಾರ್,ಪ್ರಸಾದ್ ಕೆ.ಜಿ., ಚೈತ್ರೇಶ್, ಕೌಶಿಕ್ ಡಿ.ಎಂ., ಧನುಶ್ರೀ, ಬಿಪಿನ್, ವರ್ಷಿಣಿ, ಜ್ಞಾನ್, ಸವಿತಾ, ಅನುಶ್ರೀ, ರಕ್ಷಿತಾ, ಅನನಾ, ಶಿಲ್ಪಾ, ಭಾಗ್ಯಶ್ರೀ, ಸುವರ್ಣ ಅವರನ್ನು ದೇವಳದ ವತಿಯಿಂದ ಸನ್ಮಾನಿಸಲಾಯಿತು.

ಶಿಕ್ಷಕ- ರಕ್ಷಕ ಸಂಘದ ಅಧ್ಯಕ್ಷ ರಾಮಕೃಷ್ಣ ಹೊಳ್ಳಾರು ಅಧ್ಯಕ್ಷತೆ ವಹಿಸಿದ್ದರು. ಮಾಸ್ಟರ್ ಪ್ಲಾೃನ್ ಮೇಲುಸ್ತುವಾರಿ ಸಮಿತಿ ಸದಸ್ಯ ಪವನ್ ಎಂ.ಡಿ. ಮುಖ್ಯ ಅತಿಥಿಯಾಗಿದ್ದರು. ಮುಖ್ಯಶಿಕ್ಷಕಿ ನಂದಾ ಹರೀಶ್, ಹಿರಿಯ ಸಹ ಶಿಕ್ಷಕ ಎಂ.ಕೃಷ್ಣ ಭಟ್ ಸೇರಿದಂತೆ ಶಿಕ್ಷಕ-ರಕ್ಷಕ ಸಂಘದ ಪದಾಧಿಕಾರಿಗಳು, ಶಿಕ್ಷಕರು ಉಪಸ್ಥಿತರಿದ್ದರು. ಶಿಕ್ಷಕ ರಘು ಬಿಜೂರು ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net