ಮನೆ ಕಳ್ಳತನ ಆರೋಪಿ ಬಂಧನ

ಮನೆ ಕಳ್ಳತನ ಆರೋಪಿ ಬಂಧನ
Published on

ಆಲೂರು: ಆಲೂರು ಠಾಣೆಯ ಪೊಲೀಸರು ಮತ್ತು ಸಕಲೇಶಪುರ ಡಿವೈಎಸ್ಪಿ ಕಚೇರಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಮನೆಕಳ್ಳತನ ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತನಿಂದ 58,555 ರೂ. ನಗದು ಹಾಗೂ 25 ಲಕ್ಷ ರೂ. ಬೆಲೆಬಾಳುವ 284.74 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಹಾಸನದ ವಿಜಯನಗರ ಬಡಾವಣೆಯ ನಿವಾಸಿ ಕಾನೂನು ಸಂಘರ್ಷಕ್ಕೊಳಗಾದ ಸೈಯದ್ ಸಾಧಿಕ್ ಬಂಧಿತ ಆರೋಪಿ. ಕೆಲವು ತಿಂಗಳುಗಳಿಂದ ಆಲೂರು ಪಟ್ಟಣ ಹಾಗೂ ತಾಲೂಕಿನ ವಿವಿಧ ಗ್ರಾಮದ ಮನೆಗಳಲ್ಲಿ ಕಳ್ಳತನ ಆಗಿರುವ ಬಗ್ಗೆ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದವು.

ಈ ಬಗ್ಗೆ ತನಿಖೆ ನಡೆಸಲು ಸಕಲೇಶಪುರ ಡಿವೈಎಸ್ಪಿ ಪ್ರಮೋದ್ ಕುಮಾರ್ ಮಾರ್ಗದರ್ಶನದಲ್ಲಿ, ಆಲೂರು ಪೊಲೀಸ್ ಠಾಣೆಯ ನಿಯೋಜಿತ ಸರ್ಕಲ್ ಇನ್‌ಸ್ಪೆಕ್ಟರ್ ನಿರಂಜನ್ ಕುಮಾರ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಪ್ರಕರಣವನ್ನು ಭೇದಿಸಿರುವ ಪೊಲೀಸರು, ಆರೋಪಿಯನ್ನು ಬಂಧಿಸಿ ಹಣ ಹಾಗೂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ಪ್ರಭಾರ ಸರ್ಕಲ್ ಇನ್‌ಸ್ಪ್ಪೆಕ್ಟರ್ ನಿರಂಜನ್ ಕುಮಾರ್, ಸಬ್‌ಇನ್‌ಸ್ಪ್ಪೆಕ್ಟರ್ ಜನಾಭಾಯಿ ಕಡಪಟ್ಟಿ, ಅಪರಾಧ ವಿಭಾಗದ ಪಿಎಸ್‌ಐ ನಾಗೇಶ್, ಸಿಬ್ಬಂದಿ ಪೂರ್ಣೇಂದ್ರ, ಪುನೀತ್, ಹರೀಶ್, ಅಶೋಕ್, ರವಿ, ಸಕಲೇಶಪುರ ಗ್ರಾಮಾಂತರ ಠಾಣೆಯ ಸುನೀಲ್ ಕುಮಾರ್, ಶಶಾಂಕ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net