

ಹಾಸನ: ಹಾಸನಾಂಬ ಜಾತ್ರಾ ಮಹೋತ್ಸವದಲ್ಲಿ ಹಗಲು-ರಾತ್ರಿ ಎನ್ನದೆ ಶ್ರಮಿಸಿ ನಗರದ ಸ್ವಚ್ಛತೆಯನ್ನು ಕಾಪಾಡಿದ ಪೌರಕಾರ್ಮಿಕರ ಸೇವೆಗೆ ಹಾಸನ ಮಹಾನಗರ ಪಾಲಿಕೆ ಅಧಿಕಾರಿಗಳು ವಿನೂತನವಾಗಿ ಗೌರವ ಸಲ್ಲಿಸಿದ್ದಾರೆ.
ನಗರದ ಪ್ರಸಿದ್ಧ ಐಷಾರಾಮಿ ಹೋಟೆಲ್‌ನಲ್ಲಿ 170ಕ್ಕೂ ಹೆಚ್ಚು ಪೌರಕಾರ್ಮಿಕರಿಗೆ ಆತಿಥ್ಯ ನೀಡುವ ಮೂಲಕ ಆಯುಕ್ತ ಕೃಷ್ಣಮೂರ್ತಿ ಹಾಗೂ ಇಂಜಿನಿಯರ್ ಕವಿತಾ ಕೃತಜ್ಞತೆ ಸಲ್ಲಿದ್ದಾರೆ.
ವರ್ಷಕ್ಕೊಮ್ಮೆ ನಡೆಯುವ ಹಾಸನಾಂಬ ಜಾತ್ರಾ ಮಹೋತ್ಸವಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ನಿತ್ಯ ಆಗಮಿಸುತ್ತಿದ್ದರು. ಕಳೆದ 15 ದಿನದಲ್ಲಿ ದೇವಿಯ ದರ್ಶನಕ್ಕೆ ಸುಮಾರು 26 ಲಕ್ಷ ಭಕ್ತರು ಆಗಮಿಸಿದ್ದರು. ಈ ಸಂದರ್ಭದಲ್ಲಿ ನಗರವನ್ನು ಸ್ವಚ್ಛವಾಗಿಡುವುದು ಅತ್ಯಂತ ಸವಾಲಿನ ಕೆಲಸ. ಪಾಲಿಕೆಯಲ್ಲಿ ಪೌರಕಾರ್ಮಿಕರ ಕೊರತೆಯಿಂದಾಗಿ ಈ ಬಾರಿ ಚಿತ್ರದುರ್ಗದಿಂದ ಗುತ್ತಿಗೆ ಆಧಾರದಲ್ಲಿ 60ಕ್ಕೂ ಹೆಚ್ಚು ಪೌರಕಾರ್ಮಿಕರನ್ನು ಕರೆಸಿಕೊಳ್ಳಲಾಗಿತ್ತು. ಪೌರಕಾರ್ಮಿಕರು ತಮ್ಮ ಕರ್ತವ್ಯದಲ್ಲಿ ಶ್ರದ್ಧೆ ಮತ್ತು ನಿಷ್ಠೆ ತೋರಿದರು. ರಸ್ತೆಗಳು, ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶಗಳು ಹಾಗೂ ಸಾರ್ವಜನಿಕ ಸ್ಥಳಗಳನ್ನು ಅಚ್ಚುಕಟ್ಟಾಗಿ ಸ್ವಚ್ಛಗೊಳಿಸುವ ಮೂಲಕ ಜಾತ್ರೆ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಜಾತ್ರೆ ಮುಕ್ತಾಯದ ನಂತರ ಪೌರಕಾರ್ಮಿಕರು ಚಿತ್ರದುರ್ಗಕ್ಕೆ ವಾಪಸ್ ಹೋಗುವ ಮುನ್ನ ಅವರ ಸೇವೆಯನ್ನು ಕೃತಜ್ಞತೆಯಿಂದ ಸ್ಮರಿಸಲು ಆಯುಕ್ತ ಕೃಷ್ಣಮೂರ್ತಿ ಮತ್ತು ಇಂಜಿನಿಯರ್ ಕವಿತಾ ಸ್ವಂತ ಖರ್ಚಿನಲ್ಲಿ ಐಷಾರಾಮಿ ಹೋಟೆಲ್‌ನಲ್ಲಿ ಊಟದ ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಹಾಸನ ಪಾಲಿಕೆ ಸ್ಥಳೀಯ ಪೌರಕಾರ್ಮಿಕರು ಹಾಗೂ ಸಿಬ್ಬಂದಿ ಸೇರಿಕೊಂಡು ಸಂಭ್ರಮಿಸಿದರು. ಹೋಟೆಲ್‌ನ ವಿಶೇಷ ಭೋಜನ ಮಂದಿರವನ್ನು ಅಲಂಕರಿಸಿ ವಿವಿಧ ಬಗೆಯ ರುಚಿಕರ ಆಹಾರ ಪದಾರ್ಥಗಳು, ಸಿಹಿತಿಂಡಿ, ಪಾನೀಯಗಳು, ಸಾಂಪ್ರದಾಯಿಕ ಊಟದ ವ್ಯವಸ್ಥೆ ಮಾಡಲಾಗಿತ್ತು. ಹೋಟೆಲ್‌ನ ಸಿಬ್ಬಂದಿ ಆತ್ಮೀಯವಾಗಿ ಪೌರಕಾರ್ಮಿಕರ ಆತಿಥ್ಯ ನಿರ್ವಹಿಸಿದರು.
ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ: ಈ ಅಧಿಕಾರಿಗಳ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಭಾರಿ ಪ್ರಶಂಸೆ ವ್ಯಕ್ತವಾಗಿದೆ. ಪೌರಕಾರ್ಮಿಕರನ್ನು ಗೌರವಿಸುವ ಈ ರೀತಿಯ ಕ್ರಮ ಸಮಾಜಕ್ಕೆ ಹೊಸ ಸಂದೇಶ ನೀಡಿದೆ ಎಂದು ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಾಮಾನ್ಯವಾಗಿ ಸತ್ಕಾರ ಕಾರ್ಯಕ್ರಮಗಳಿಗೆ ಕ್ಯಾಟರಿಂಗ್ ಮೂಲಕ ಆಹಾರ ವ್ಯವಸ್ಥೆ ಮಾಡಲಾಗುತ್ತದೆ. ಆದರೆ ಈ ಬಾರಿ ಅಧಿಕಾರಿಗಳು ಹೊರಗಿನಿಂದ ಊಟ ತರಿಸದೆ, ನಗರದ ಪ್ರಸಿದ್ಧ ತ್ರಿಬಲ್ ಸ್ಟಾರ್ ಹೋಟೆಲ್‌ನಲ್ಲೇ ಊಟದ ಆತಿಥ್ಯ ನೀಡಿದರು.
ಕಾರ್ಯಕ್ರಮದ ದಿನ ಬೆಳಗ್ಗೆ ಪೌರಕಾರ್ಮಿಕರು ಹೋಟೆಲ್‌ನಿಂದ ಊಟ ತರಿಸಲಾಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ಅವರಿಗೆ ನೇರವಾಗಿ ಹೋಟೆಲ್‌ನಲ್ಲಿ ್ಯವಸ್ಥೆ ಮಾಡಲಾಗಿದೆ ಎಂಬುದು ತಿಳಿದಾಗ ಸಂತೋಷಕ್ಕೆ ಪಾರವೇ ಇರಲಿಲ್ಲ.
ಇಂಜಿನಿಯರ್ ಕವಿತಾ ಅವರು ಹಾಗೂ ಆಯುಕ್ತ ಕೃಷ್ಣಮೂರ್ತಿ ಮುಂಗಡವಾಗಿ ಹೋಟೆಲ್‌ನಲ್ಲಿ ಹಾಲ್ ಕಾಯ್ದಿರಿಸಿದ್ದರು. ಎಲ್ಲ ಪೌರಕಾರ್ಮಿಕರು ಹೋಟೆಲ್‌ಗೆ ತೆರಳಿದಾಗ ಆತ್ಮೀಯ ವಾತಾವರಣ, ಸುಸಜ್ಜಿತ ಟೇಬಲ್‌ಗಳು, ಆತ್ಮೀಯ ಸ್ವಾಗತ ಅವರಿಗೆ ದೊರೆಯಿತು. ನಾವು ಇಂಥ ಹೋಟೆಲ್ ಒಳಗೆ ಕಾಲಿಡುತ್ತೇವೆ ಎಂದು ಊಹಿಸಲೂ ಸಾಧ್ಯವಾಗಲಿಲ್ಲ ಎಂದು ಹಲವರು ಭಾವುಕರಾದರು.
ಹಾಸನಾಂಬ ಜಾತ್ರಾ ಮಹೋತ್ಸವದ ಯಶಸ್ಸಿನ ಪ್ರಮುಖ ಕಾರಣಕರ್ತರಾದ ಎಲ್ಲ ಪೌರಕಾರ್ಮಿಕರಿಗೆ ಒಂದು ದಿನದ ಊಟದ ವ್ಯವಸ್ಥೆಯನ್ನು ತ್ರಿಬಲ್ ಸ್ಟಾರ್ ಹೋಟೆಲ್‌ನಲ್ಲಿ ಮಾಡಲಾಗಿತ್ತು. ಎಲ್ಲ ಪೌರಕಾರ್ಮಿಕರೂ ಸಂತೋಷದಿಂದ ಭಾಗವಹಿಸಿ ಸಂತೋಷಪಟ್ಟರು.
ಕೃಷ್ಣಮೂರ್ತಿ ಆಯುಕ್ತ, ಮಹಾನಗರ ಪಾಲಿಕೆ