ಬಂದ್‌ನಿಂದಾಗಿ ಆಸ್ಪತ್ರೆಗಳಿಂದ ದೂರ ಉಳಿದ ರೋಗಿಗಳು

vv
Published on

ಬೆಂಗಳೂರು: ನಗರದಲ್ಲಿ ಮಂಗಳವಾರ ಆಸ್ಪತ್ರೆಗಳ ಸೇವೆ ಎಂದಿನಂತೆ ಲಭ್ಯವಿತ್ತಾದರೂ, ಕಾವೇರಿ ನೀರು ಸಂಬಂಧ ಕರೆನೀಡಿದ್ದ ಬೆಂಗಳೂರು ಬಂದ್‌ನಿಂದಾಗಿ ಬಹಳಷ್ಟು ರೋಗಿಗಳು ಆಸ್ಪತ್ರೆಗಳಿಂದ ದೂರವೇ ಉಳಿದಿದ್ದರು. ಆರೋಗ್ಯ ಸೇವೆಯಲ್ಲಿ ಯಾವುದೇ ವ್ಯತ್ಯಯ ಆಗಿಲ್ಲ.

ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ಅರೆವೈದ್ಯರು ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿದ್ದರು. ಆದರೆ ಹೆಚ್ಚಿನ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಕೇವಲ ಶೇ. 30ಕ್ಕಿಂತ ಕಡಿಮೆ ಇತ್ತು. ಆಸ್ಪತ್ರೆಗಳು ಸಿಬ್ಬಂದಿಯನ್ನು ಕರೆತರಲು ಹಾಗೂ ಮನೆಗೆ ಬಿಡಲು ಆಂಬ್ಯುಲೆನ್ಸ್‌ಗಳ ವ್ಯವಸ್ಥೆ ಮಾಡಿದ್ದವು. ಬಿಎಂಟಿಸಿ ಸೇರಿ ಸಾರಿಗೆ ಸೌಲಭ್ಯ ಇದ್ದಿದ್ದರಿಂದ ಶುಶ್ರೂಷಕರು ಮತ್ತು ಇತರ ಸಿಬ್ಬಂದಿಗಳು ತಾವಾಗಿಯೇ ಕೆಲಸಕ್ಕೆ ಹಾಜರಾಗಿದ್ದರು.

ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಬಿಎಂಸಿಆರ್‌ಐ)ಅಡಿಯಲ್ಲಿನ ವಾಣಿ ವಿಲಾಸ ಮತ್ತು ಮಿಂಟೊ ಕಣ್ಣಿನ ಆಸ್ಪತ್ರೆಗಳಲ್ಲಿ ಹೊರ ರೋಗಿಗಳ ಸಂಖ್ಯೆ ಶೇ. 50% ಕುಸಿದಿತ್ತು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶೇ. 35% ಕಡಿಮೆಯಾಗಿತ್ತು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸರಾಸರಿ 1,210 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದ ಹೊರರೋಗಿ ವಿಭಾಗ (ಒಪಿಡಿ)ದಲ್ಲಿ ಬಂದ್‌ನಿಂದಾಗಿ 795 ರೋಗಿಗಳು ಮಾತ್ರ ಆಸ್ಪತ್ರೆಗೆ ಭೇಟಿ ನೀಡಿದ್ದರು. ದಾಖಲಾತಿ ಸಂಖ್ಯೆ 125ರಿಂದ 63ಕ್ಕೆ ಇಳಿಕೆಯಾಗಿತ್ತು. ಎಮೆರ್ಜೆನ್ಸಿ ಟ್ರಾಮಾ ಸೇರಿ ಆಸ್ಪತ್ರೆಗಳಲ್ಲಿ ತುರ್ತು ಸೇವೆ ಹಾಗೂ ನಿಗದಿತ ಶಸಚಿಕಿತ್ಸೆಗಳು ಎರಡೂ ಎಂದಿನಂತೆ ನಡೆಸಲಾಯಿತು ಎಂದು ಬಿಎಂಸಿಆರ್‌ಐ ಡೀನ್ ಮತ್ತು ನಿರ್ದೇಶಕ ಕೆ. ರಮೇಶ್ ಕೃಷ್ಣ ತಿಳಿಸಿದ್ದಾರೆ.

ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯಲ್ಲಿ, ಮಂಗಳವಾರ ರೋಗಿಗಳ ಸಂಖ್ಯೆ 1,500 ರಿಂದ 770 ಕ್ಕೆ ಇಳಿಕೆಯಾಗಿತ್ತು. ಆದರೆ ಸಾಮಾನ್ಯ ದಿನಗಳಿಗೆ ಹೋಲಿಸಿದರೆ ದಾಖಲಾತಿಗಳ ಸಂಖ್ಯೆ 50 ರಿಂದ 68ಕ್ಕೆ ಹೆಚ್ಚಿದೆ ಎಂದು ಡೀನ್ ಮತ್ತು ನಿರ್ದೇಶಕ ಡಾ. ಎಚ್. ವಿ. ಮನೋಜ್ ಕುಮಾರ್ ಹೇಳಿದರು.

ಶ್ರೀ ಜಯದೇವ ಹೃದಯರಕ್ತನಾಳದ ಸಂಶೋಧನೆ ಮತ್ತು ವಿಜ್ಞಾನ ಸಂಸ್ಥೆಯಲ್ಲೂ ಇದೇ ಪರಿಸ್ಥಿತಿ ಇದ್ದು, ಒಪಿಡಿಯಲಿ ್ಲ ರೋಗಿಗಳ ಸಂಖ್ಯೆ 1,500 ರಿಂದ 1,050 ತಗ್ಗಿತ್ತು. ಅದೇ ರೀತಿ ದಾಖಲಾತಿಗಳ ಸಂಖ್ಯೆಯು 250 ರಿಂದ 120 ಕ್ಕೆ ಇಳಿಕೆಯಾಗಿತ್ತು. ದೂರದ ಊರುಗಳಿಂದ ಬರುವ ಜನರು ಬಂದ್ ಹಿನ್ನೆಲ್ಲಿ ಭೇಟಿ ನೀಡಿಲ್ಲ ಎಂದು ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ತಿಳಿಸಿದರು.

ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಹೊಸ ಪ್ರಕರಣಗಳ ಸಂಖ್ಯೆಯ 120 ರಿಂದ 43 ಕ್ಕೆ ಇಳಿಕೆಯಾಗಿತ್ತು. ಾಲೋಅಪ್ ಪ್ರಕರಣಗಳು 2,000 ರಿಂದ ಮಂಗಳವಾರ 852 ಕ್ಕೆ ಇಳಿದಿದ್ದರೆ, ದಾಖಲಾತಿಗಳನ್ನು ಸ್ವಲ್ಪಮಟ್ಟಿಗೆ ತಗ್ಗಿದೆ ಎಂದು ಆಸ್ಪತ್ರೆಯ ವೈದ್ಯಾಧಿಕಾರಿಗಳು ಮಾಹಿತಿ ನೀಡಿದರು.

ಕೆಸಿ ಜನರಲ್, ಜಯನಗರ ಜನರಲ್, ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ, ರಾಜೀವ್ ಗಾಂಧಿ ಎದೆ ರೋಗಗಳ ಆಸ್ಪತ್ರೆ, ಬಿಬಿಎಂಪಿ ಆಸ್ಪತ್ರೆಗಳು ಸೇರಿ ಹೆಚ್ಚಿನ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಬಹುತೇಕ ಕಡಿಮೆಯಾಗಿತ್ತು.

ಆಂಬುಲೆನ್ಸ್ ಸರಾಗ ಸಂಚಾರ:

ಬಂದ್‌ನಿಂದಾಗಿ ರಸ್ತೆಗಳಲ್ಲಿ ವಾಹನಗಳ ದಟ್ಟಣೆಗೆ ಬಿಡುವು ದೊರೆತಿದ್ದರಿಂದ ನಿತ್ಯ ಆಸ್ಪತ್ರೆ ತಲುಪಲು ಪರದಾಡುತ್ತಿದ್ದ ಆಂಬುಲೆನ್ಸ್‌ಗಳು ಮಂಗಳವಾರ ಸರಾಗವಾಗಿ ಸಂಚರಿಸಿದವು. ರೋಗಿಗಳನ್ನು ನಿಗದಿತ ಸಮಯಕ್ಕೆ ಆಸ್ಪತ್ರೆಗಳಿಗೆ ತಲುಪಿಸುವಲ್ಲಿ ಯಶಸ್ವಿಯಾದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net