ಸೆಪ್ಟೆಂಬರ್‌ನಲ್ಲಿ ಯುವನಿಧಿ ಯೋಜನೆ ಜಾರಿ

9 Dwd 2 (Santosh Lad)
Published on

ಹೊಸಪೇಟೆ: ಕಾಂಗ್ರೆಸ್ ಸರ್ಕಾರ ನಾಲ್ಕು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು, ಯುವ ನಿಧಿಯನ್ನು ಸೆಪ್ಟೆಂಬರ್‌ನಲ್ಲಿ ಜಾರಿಗೊಳಿಸಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಶಕ್ತಿ, ಗೃಹಜ್ಯೋತಿ ಯೋಜನೆ ಸಾಕಾರ ಗೊಳಿಸಲಾಗಿದೆ. ಶಕ್ತಿ ಯೋಜನೆಯಡಿ ಶೇ.94 ಮಹಿಳೆಯರು ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಗೃಹಲಕ್ಷ್ಮೀ ಯೋಜನೆಯ ಎಲ್ಲ ಫಲಾನುಭವಿಗಳಿಗೂ ಮಾಸಿಕ ತಲಾ 2 ಸಾವಿರ ರೂ. ನೀಡಲಾಗುವುದು. ಮುಂದಿನ ದಿನಗಳಲ್ಲಿ ಯುವನಿಧಿ ಕಾರ್ಯಕ್ರಮ ಜಾರಿ ಮಾಡಲಾಗುವುದು.

2023-24ನೇ ಸಾಲಿನಲ್ಲಿ ಪದವಿ ಉತ್ತೀರ್ಣರಾದವರಿಗೆ ನಿರುದ್ಯೋಗ ಭತ್ಯೆ ನೀಡಲಾಗುವುದು. ಐದು ಗ್ಯಾರಂಟಿಗಳಿಗೆ ಅಂದಾಜು 60 ಸಾವಿರ ಕೋಟಿ ರೂ. ವೆಚ್ಚವಾಗಲಿದೆ. ಅದರಿಂದ ಅನುದಾನದ ಕೊರತೆ ಉಂಟಾಗಲಿದೆ. ಆದರೆ, ಆರು ತಿಂಗಳಲ್ಲಿ ಎಲ್ಲವೂ ಸರಿಯಾಗಲಿದೆ ಎಂದರು.

ಕಾಂಗ್ರೆಸ್ ಸರ್ಕಾರದಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಸೇರಿದಂತೆ ವಿಪ್ಷ ನಾಯಕರ ಆರೋಪಗಳಲ್ಲಿ ಹುರುಳಿಲ್ಲ. ಆ ಬಗ್ಗೆ ದಾಖಲೆಗಳಿದ್ದರೆ ನೀಡಲಿ. ಇಲ್ಲವೇ ಕೇಂದ್ರ ಸರ್ಕಾರದ ತನಿಖಾ ಸಂಸ್ಥೆಗಳಿಗೆ ನೇರವಾಗಿ ಒಪ್ಪಿಸಲಿ ಎಂದು ಸವಾಲು ಹಾಕಿದ ಅವರು, ವರ್ಗಾವಣೆ ಎಂಬುದು ಆಡಳಿತಾತ್ಮಕ ಪ್ರಕ್ರಿಯೆ ಅಷ್ಟೇ ಎಂದರು.

ಶಾಸಕರಾದ ಎಚ್.ಆರ್. ಗವಿಯಪ್ಪ, ಈ.ತುಕಾರಾಮ್, ಕಾಂಗ್ರೆಸ್ ಮುಖಂಡರಾದ ಎಚ್‌ಎನ್‌ಎಫ್ ಇಮಾಮ್ ನಿಯಾಜಿ, ಗುಜ್ಜಲ ರಘು, ಗುಜ್ಜಲ ನಾಗರಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net