

ವೀರೇಂದ್ರ ನಾಗಲದಿನ್ನಿ ಹೊಸಪೇಟೆ
ಬಂಜಾರ ಭಾಷೆ ಮತ್ತು ಸಂಪ್ರದಾಯದ ಮೇಲೆ ಬೆಳಕು ಚೆಲ್ಲುವುದಕ್ಕಾಗಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಆರಂಭಿಸಲಾಗಿದ್ದ ಬಂಜಾರ ಭಾಷಾ ಅಭಿವೃದ್ಧಿ ಮತ್ತು ಅಧ್ಯಯನ ಕೇಂದ್ರ ಅನುದಾನದ ಕೊರತೆಯಿಂದ ಬಾಗಿಲು ಮುಚ್ಚಿದೆ. ಈ ಮೂಲಕ ವಿಶಿಷ್ಟ ಭಾಷೆ ಮತ್ತು ಸಂಪ್ರದಾಯದ ಅಧ್ಯಯನಕ್ಕೆ ಕೊಡಲಿ ಪೆಟ್ಟು ಬಿದ್ದಂತಾಗಿದೆ.
ಬಂಜಾರ ಸಮುದಾಯ ವಿಶಿಷ್ಟ ಶೈಲಿಯ ಉಡುಗೆ- ತೊಡುಗೆ, ಆಚಾರ- ವಿಚಾರದ, ಭಾಷೆ ಮತ್ತು ಸಂಸ್ಕೃತಿಯನ್ನು ಹೊಂದಿದೆ. ಆದರೆ, ಆಧುನಿಕತೆಯ ಭರಾಟೆಯಲ್ಲಿ ಬಂಜಾರ ಭಾಷೆ ಮತ್ತು ಸಂಸ್ಕೃತಿ ನೇಪಥ್ಯಕ್ಕೆ ಸರಿಯುತ್ತಿದೆ. ಬಂಜಾರ, ಲಂಬಾಣಿ, ನಾಯ್ಕ ಅಥವಾ ಗೋರ್ ಮಾಟ ಎಂದು ಕರೆಯಲಾಗುವ ಈ ಸಮುದಾಯದ ಜನರು ಲಂಬಾಣಿ ಭಾಷೆ ಬಳಸುತ್ತಿದ್ದು, ಇದು ಹಿಂದಿ, ಉರ್ದು, ರಾಜಸ್ಥಾನಿ ಹಾಗೂ ಸಂಸ್ಕೃತ ಪದಗಳು ಸಮ್ಮಿಳಿತಗೊಂಡಿದೆ.
ಲಂಬಾಣಿ ಭಾಷೆಗೆ ಶತಮಾನಗಳ ಇತಿಹಾಸವಿದೆ ಎನ್ನಲಾಗುತ್ತಿದ್ದರೂ, ಲಿಪಿ ಇಲ್ಲ. ಬಂಜಾರ ಭಾಷೆ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದಕ್ಕಾಗಿ ತಾಂಡಾ ಅಭಿವೃದ್ಧಿ ನಿಗಮದ ಆರ್ಥಿಕ ನೆರವಿನಡಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಬಂಜಾರ ಭಾಷಾಭಿವೃದ್ಧಿ ಮತ್ತು ಅಧ್ಯಯನ ಕೇಂದ್ರ ಆರಂಭಿಸಲಾಗಿತ್ತು.
ಭಾಷಾ ಅಧ್ಯಯನದ ಭಾಗವಾಗಿ ಬಂಜಾರ- ಕನ್ನಡ ನಿಘಂಟು ತರುವುದು, 1 ರಿಂದ 4ನೇ ತರಗತಿಯ ಬಂಜಾರ ಮಕ್ಕಳಿಗಾಗಿ ಆಯ್ದ ವಿಷಯಗಳ ಪ್ರತ್ಯೇಕ ಪಠ್ಯವನ್ನು ಬಂಜಾರ ಭಾಷೆಯಲ್ಲಿ ಹೊರತರುವುದು, ಬಂಜಾರ ಕರಕುಶಲ ವಸ್ತುಗಳನ್ನು ತಯಾರಿಸುವ ಕುರಿತು ಡಿಪ್ಲೊಮಾ ಕೋರ್ಸ್ ಆರಂಭಿಸಲು ಅಧ್ಯಯನ ಕೇಂದ್ರ ಉದ್ದೇಶಿಸಿತ್ತು.
ಬಂಜಾರ-ಕನ್ನಡ ನಿಘಂಟು ರಚನೆಗಾಗಿ ಭಾಷಾ ನಿಕಾಯದ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಮತ್ತು ಸಂಶೋಧಕರು ತಾಂಡಾಗಳಿಗೆ ಭೇಟಿ ಮಾಡಿ ಅಧ್ಯಯನ ನಡೆಸಿದ್ದಾರೆ. ಇದುವರೆಗೆ 11,500 ಪದಗಳನ್ನು ಕಲೆಹಾಕಿದ್ದಾರೆ. ಕನ್ನಡದ ‘ಅ’ ಅಕ್ಷರದಿಂದ ‘ಞ’ ವರೆಗಿನ ಶಬ್ದಗಳಿಗೆ ನಿಘಂಟಿನ ಸಂಪುಟ -1 ಸಿದ್ಧಪಡಿಸಲಾಗಿದೆ. ಸಂಪುಟ- 2 ಹೊರಬರುವುದು ಬಾಕಿ ಇದೆ. ಪ್ರಾಥಮಿಕ ಶಾಲಾ ಪಠ್ಯಕ್ರಮ ರಚನೆ ಸೇರಿ ಹಲವು ಯೋಜನೆಗಳನ್ನು ಅಧ್ಯಯನ ಕೇಂದ್ರ ಆರಂಭಿಸಬೇಕಿತ್ತು.
ಈ ನಡುವೆ ಬಂಜಾರ ಅಧ್ಯಯನ ಕೇಂದ್ರದ ನಿರ್ದೇಶಕ, ಇಬ್ಬರು ಸಂಶೋಧಕರು ಸೇರಿ ಏಳು ಜನ ಸಿಬ್ಬಂದಿಯನ್ನು ಸೇವೆಯಿಂದ ತಾತ್ಕಾಲಿಕ ಬಿಡುಗಡೆಗೊಳಿಸಲಾಗಿದೆ. ಈ ಕುರಿತು 2023ರ ಮೇ 1 ರಿಂದ ಪೂರ್ವಾನ್ವಯವಾಗುವಂತೆ ಜೂ.8 ರಂದು ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಆದೇಶ ಹೊರಡಿಸಿದ್ದಾರೆ. ಇದರಿಂದಾಗಿ ಬಂಜಾರ ಭಾಷಾಭಿವೃದ್ಧಿ ಮತ್ತು ಸಂಶೋಧನೆಗೆ ಕೊಕ್ಕೆ ಬಿದ್ದಿದೆ.
ಬಂಜಾರ ಭಾಷಾಭಿವೃದ್ಧಿ ಮತ್ತು ಅಧ್ಯಯನ ಕೇಂದ್ರ 2017ರಲ್ಲಿ ಆರಂಭಗೊಂಡಿದ್ದು, ತಾಂಡಾ ಅಭಿವೃದ್ಧಿ ನಿಗಮದಿಂದ ಮೊದಲ ಹಂತದಲ್ಲಿ 1.50 ಕೋಟಿ ರೂ. ಬಿಡುಗಡೆ ಮಾಡಲಾಗಿತ್ತು. 2020ರಲ್ಲಿ 1.50 ಕೋಟಿ ರೂ.ಬಿಡುಗಡೆ ಮಾಡಲಾಗಿತ್ತು. ಭಾಷಾ ಅಧ್ಯಯನ ನಿಕಾಯದ ಅಧೀನಕ್ಕೆ ಒಳಪಟ್ಟಿದ್ದ ಕೇಂದ್ರವನ್ನು 2021ರಲ್ಲಿ ಪ್ರತ್ಯೇಕಗೊಳಿಸಿ ನಿರ್ದೇಶಕ ಹಾಗೂ ಸಿಬ್ಬಂದಿ ನೇಮಕ ಮಾಡಲಾಗಿತ್ತು. ಆದರೆ, ಅಧ್ಯಯನ ಕೇಂದ್ರದ ಕಾರ್ಯನಿರ್ವಹಣೆ ಬಗ್ಗೆ ತಾಂಡಾ ಅಭಿವೃದ್ಧಿ ನಿಗಮದ ಉನ್ನತಾಧಿಕಾರಿಗಳಲ್ಲಿ ಅಸಮಾಧಾನ ಇತ್ತು ಎನ್ನಲಾಗಿದೆ.
ಬಂಜಾರ ಭಾಷಾ ಅಧ್ಯಯನ ಕೇಂದ್ರ ನಿರಂತರವಾಗಿರಬೇಕೆಂಬ ದೃಷ್ಟಿಕೋನದಲ್ಲಿ ಅನೇಕ ಯೋಜನೆಗಳನ್ನು ರೂಪಿಸಲಾಗಿದೆ. ಆದರೆ, ತಾಂಡಾ ಅಭಿವೃದ್ಧಿ ನಿಗಮ ಈವರೆಗೆ ಬಿಡುಗಡೆ ಮಾಡಿದ್ದ 3 ಕೋಟಿ ರೂ. ಅನುದಾನ ಖಾಲಿಯಾಗಿದೆ. ಬಂಜಾರ-ಕನ್ನಡ ನಿಂಘಟುವಿನ ಮೊದಲ ಸಂಪುಟ ಸಿದ್ಧಪಡಿಸಲಾಗಿದೆ. 2ನೇ ಸಂಪುಟವೂ ಮುದ್ರಣಕ್ಕೆ ಬಹುತೇಕ ಸಿದ್ಧವಾಗಿದೆ. ಇತರ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಕುರಿತು ನಿಗಮದ ಅಧಿಕಾರಿಗಳೊಂದಿಗೆ ಚರ್ಚಿಸಿ, ಸರ್ಕಾರದ ಮುಂದಿನ ಬಜೆಟ್‌ನಲ್ಲಿ ಸೇರಿಸುವಂತೆ ಕೇಳಿಕೊಳ್ಳುತ್ತೇವೆ.ಡಾ.ಸುಬ್ಬಣ್ಣ ರೈಕನ್ನಡ ವಿವಿ ಕುಲಸಚಿವ