ತುಂಡಾಗಿದ್ದ ಬೆರಳುಗಳ ಯಶಸ್ವಿಯಾಗಿ ಮರುಜೋಡಿಸಿದ ಹಾಸ್ಮ್ಯಾಟ್ ಆಸ್ಪತ್ರೆ ವೈದ್ಯರು

Hosmat - 1
Published on

ಬೆಂಗಳೂರು: ಮಹಿಳೆಯೊಬ್ಬರ ತುಂಡಾಗಿದ್ದ ನಾಲ್ಕು ಬೆರಳುಗಳನ್ನು ಪುನರ್ ಜೋಡಿಸುವಲ್ಲಿ ನಗರದ ಹಾಸ್ಮ್ಯಾಟ್ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿದ್ದಾರೆ.

ಕೋಲಾರ ಮೂಲಕ 44 ವರ್ಷದ ಮಂಜುಳಾ ಅವರು ಅ. 1ರಂದು ಬೆಳಗ್ಗೆ 11.30ರ ಸುಮಾರಿಗೆ ವಿದ್ಯುತ್ ಯಂತ್ರದಿಂದ ಮೇವು ಕತ್ತರಿಸುವಾಗ ಯಂತ್ರಕ್ಕೆ ಕೈ ಸಿಲುಕಿ ಅವರ ಹೆಬ್ಬೆರಳು ಸೇರಿ ನಾಲ್ಕು ಬೆರಳುಗಳು ದೇಹದಿಂದ ಬೇರ್‌ಪಟ್ಟಿದ್ದವು. ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಹಾಸ್ಮ್ಯಾಟ್ ಆಸ್ಪತ್ರೆಗೆ ದಾಖಲಾದರು.

ಈ ವೇಳೆ ಅವರ ಹೆಬ್ಬೆರಳು, ತೋರುಬೆರಳು, ಮಧ್ಯದ ಬೆರಳು, ಉಂಗುರದ ಬೆರಳು ಸಂಪೂರ್ಣ ತುಂಡಾಗಿದ್ದವು. ಅವನ್ನು ಸಂರಕ್ಷಿಸಿ ಐಸ್ ಬಾಕ್ಸ್‌ನಲ್ಲಿ ತಂದಿದ್ದರು. (ಈ ರೀತಿ ಗಾಯಗೊಂಡ 4 ರಿಂದ 6 ಗಂಟೆ ಒಳಗೆ ಚಿಕಿತ್ಸೆ ನೀಡಿದರೆ ಉತ್ತಮ ಲಿತಾಂಶ ಸಾಧ್ಯ) ಮಧ್ಯಾಹ್ನ 3 ಗಂಟೆಗೆ ಆಸ್ಪತ್ರೆಯ ತುರ್ತು ವಿಭಾಗಕ್ಕೆ ಆಗಮಿಸಿದ ಮಹಿಳೆಯನ್ನು ದಾಖಲಿಸಿಕೊಂಡು ವಿವರ ಪಡೆದು ತುರ್ತು ಚಿಕಿತ್ಸೆ ಆರಂಭಿಸಲಾಯಿತು.

ಮಹಿಳೆಯ ಕೈನ ಬೆರಳುಗಳ ಅಪಧಮನಿಗಳು ತೆಳುವಾದ ಹತ್ತಿ ದಾರದ ಗಾತ್ರ ಹೊಂದಿದ್ದು, ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಥಾಮಸ್ ಚಾಂಡಿ ಮಾರ್ಗದರ್ಶನದಲ್ಲಿ ಡಾ. ಕಣ್ಣನ್ ಕರುಪ್ಪಯ್ಯ ಕುಮಾರ್, ಡಾ. ಎನ್. ಕೆ. ದೀಪು, ಅರವಳಿಕೆ ತಜ್ಞ ಡಾ. ಗೌತಮ್ ಪಟೇಲ್ ವಿಶೇಷ ಅಪರೇಟಿಂಗ್ ಮೈಕ್ರೋಸ್ಕೋಪ್ ಬಳಸಿ ಶಸಚಿಕಿತ್ಸೆ ನಡೆಸಿದರು.

ಮೊದಲಿಗೆ ಕತ್ತರಿಸಿದ ಎಲ್ಲಾ ಅಪಧಮನಿಗಳು, ರಕ್ತನಾಳಗಳು, ನರಗಳು ಮತ್ತು ಸ್ನಾಯುರಜ್ಜುಗಳನ್ನು ಪುನರ್ನಿರ್ಮಿಸಲಾಯಿತು ಮತ್ತು ಮುರಿದ ಮೂಳೆಗಳನ್ನು ಶಸ್ತ್ರಚಿಕಿತ್ಸೆಯ ತಂತಿಗಳನ್ನು ಬಳಸಿ ಸರಿಪಡಿಸಲಾಯಿತು. ಭಾನುವಾರ ಸಂಜೆ 4 ಗಂಟೆಗೆ ಶಸ್ತ್ರಚಿಕಿತ್ಸೆ ಪ್ರಾರಂಭವಾಯಿತು ಮತ್ತು ಮರುದಿನ ಬೆಳಿಗ್ಗೆ 4 ಗಂಟೆಗೆ ವರೆಗೆ (ನಿರಂತರ 12 ಗಂಟೆಗಳ ಕಾಲ) ಶಸಚಿಕಿತ್ಸೆ ನಡೆಸಲಾಯಿತು. ಈಗ ಎಲ್ಲಾ ಬೆರಳುಗಳಲ್ಲಿ ಮೊದಲಿನಂತೆ ರಕ್ತ ಪರಿಚಲನೆ ಆಗುತ್ತಿದೆ. ಒಂದೆರಡುದಿನಗಳಲ್ಲಿ ರೋಗಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು. 2-3 ತಿಂಗಳಲ್ಲಿ ಮಹಿಳೆ ಮೊದಲಿನಂತೆ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳಬಹುದಾಗಿದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net