ಹೊಸಲು ಮಾರಮ್ಮದೇವಿ ಜಾತ್ರೆ ಸಂಭ್ರಮ

HUN-MAR-18-1(HOSALU MARAMMA JATRE)
ಹುಣಸೂರು ತಾಲೂಕು ಬಿಳಿಕೆರೆ ಹೋಬಳಿಯ ಹೊಸಲು ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು.
Published on

ಹುಣಸೂರು: ತಾಲೂಕಿನ ಬಿಳಿಕೆರೆ ಹೋಬಳಿ ಹೊಸಲು ಮಾರಮ್ಮದೇವಿಯ ಜಾತ್ರಾ ಮಹೋತ್ಸವ ಸೋಮವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಬಿಳಿಕೆರೆ ಹೋಬಳಿ ವ್ಯಾಪ್ತಿಯ 7 ಗ್ರಾಮಗಳಾದ ಮಲ್ಲಿನಾಥಪುರ, ಬೋಳನಹಳ್ಳಿ, ರಂಗಯ್ಯನಕೊಪ್ಪಲು, ಎಮ್ಮೆಕೊಪ್ಪಲು, ಬಿಳಿಕೆರೆ, ಮೈದನಹಳ್ಳಿ, ರಾಮೇನಹಳ್ಳಿ ಗ್ರಾಮದ ಜನರು ಒಂದಾಗಿ ಜಾತ್ರಾ ಮಹೋತ್ಸವನ್ನು ಆಚರಿಸುತ್ತಾರೆ. ಸಂಪ್ರದಾಯದಂತೆ ದೇವಿಯ ಉತ್ಸವ ಮೂರ್ತಿಯನ್ನು ಮಲ್ಲಿನಾಥಪುರದಿಂದ ಮೆರವಣಿಗೆಯ ಮೂಲಕ ಜನರು ಹೊತ್ತು ತಂದರು. ದಾರಿಯುದ್ದಕ್ಕೂ ಹರಕೆ ಹೊತ್ತವರು ತೆಂಗಿನಕಾಯ ಒಡೆಯುತ್ತಾ ಸಾಗಿಬಂದರು. ಮೆರವಣಿಗೆಯಲ್ಲಿ ಕಲಶ ಹೊತ್ತ ಮಹಿಳೆಯರು ಸಾಗಿದರು.

ದೇವಾಲಯದ ಆವರಣದಲ್ಲಿ ಉತ್ಸವ ಮೂರ್ತಿಯನ್ನು ಸ್ವಸ್ಥಾನಕ್ಕೆ ಸೇರಿಸಿದ ನಂತರ ಹರಕೆ ಹೊತ್ತವರು ಜೀವಂತ ಕೋಳಿಗಳನ್ನು ದೇವಾಲಯದ ಕಟ್ಟಡದ ಛಾವಣಿಯ ಮೇಲೆ ಎಸೆಯುವ ಮೂಲಕ ಹರಕೆ ತೀರಿಸಿದರು. ಈ ಹಿಂದೆ ಕುರಿ ಮತ್ತು ಕೋಳಿಯನ್ನು ಬಲಿ ನೀಡಿ ಎಸೆಯಲಾಗುತ್ತಿತ್ತು. ಈಗ ಪ್ರಾಣಿಬಲಿ ನಿಷೇಧಿಸಲಾಗಿದೆ. ಛಾವಣಿ ಮೇಲೆ ನಿಂತ ದೇವಿಯ ಭಕ್ತರು ಕೋಳಿಗಳನ್ನು ತೆಗೆದುಕೊಂಡು ಹೋಗುವುದು ವಾಡಿಕೆ. ಜಾತ್ರೆಯ ಅಂಗವಾಗಿ ಮಾಳದಲ್ಲಿ ಸಿಹಿ ತಿನಿಸುಗಳ ಅಂಗಡಿಗಳು, ಮಕ್ಕಳ ಆಟಿಕೆ ಅಂಗಡಿಗಳು ತೆರೆದಿದ್ದವು. ಬೇಸಿಗೆ ತಣಿಸಲು ಅಲ್ಲಲ್ಲಿ ಮಜ್ಜಿಗೆ, ಪಾನಕವನ್ನು ಭಕ್ತರಿಗೆ ಯುವಕರ ಸಂಘಗಳು, ದೇವಿಯ ಭಕ್ತರು ವಿತರಿಸಿದರು.

ಸಂಜೆ 6ರ ನಂತರ ಯಾರೊಬ್ಬರೂ ಇರುವಂತಿಲ್ಲ: ಈ ಉತ್ಸವದ ಮತ್ತೊಂದು ವಿಶೇಷವೆಂದರೆ ಸಂಜೆ 6ರ ನಂತರ ದೇವಾಲಯದ ಸುತ್ತ ಯಾರೊಬ್ಬರೂ ಇರುವಂತಿಲ್ಲ. ಜಾತ್ರೆಗಾಗಿ ಅಂಗಡಿ ಮುಂಗಟ್ಟುಗಳನ್ನು ಕಟ್ಟಿಕೊಂಡವರು, ಜಾತ್ರೆಗೆ ಬಂದವರು ಸಂಜೆ 6 ಗಂಟೆಯೊಳಗೆ ಜಾಗ ಖಾಲಿ ಮಾಡುತ್ತಾರೆ. ಸಂಜೆ ನಂತರ ಅಮ್ಮನವರು ತಮ್ಮನ್ನು ನಂಬಿಕೊಂಡಿರುವ ಬಂಟರಿಗೆ ಊಟ ಬಡಿಸುತ್ತಾಳೆನ್ನುವುದು ಇಲ್ಲಿನ ಜನರ ಧಾರ್ಮಿಕ ನಂಬಿಕೆ. ಹಾಗಾಗಿ ಯಾರೊಬ್ಬರೂ ಅಲ್ಲಿರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net