ಹೊಸದುರ್ಗದಲ್ಲಿ ರಾಯರ ಆರಾಧನಾ ಮಹೋತ್ಸವ 20 ರಿಂದ

161
Published on

ಹೊಸದುರ್ಗ: ಪಟ್ಟಣದ ಹುಳಿಯಾರು ವೃತ್ತದ ಆಂಜನೇಯ ಸ್ವಾಮಿ ದೇಗುಲದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮೂಲ ಮೃತ್ತಿಕಾ ಬೃಂದಾವನದಲ್ಲಿ ಆ. 20 ರಿಂದ 22ರ ವರೆಗೆ ಶ್ರೀ ರಾಘವೇಂದ್ರ ಸಾರ್ವಭೌಮರ 353ನೇ ಆರಾಧನಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.

ಪಟ್ಟಣದ ರಾಘವೇಂದ್ರ ಸ್ವಾಮಿ ಮಠದಲ್ಲಿ ಶುಕ್ರವಾರ ಆಯೋಜಿಸಿದ್ದ ಆರಾಧನಾ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಸೇವಾ ಸಮಿತಿ ಅಧ್ಯಕ್ಷ ಮಂಜುನಾಥ ದಿವಾಕರ್ ಈ ಮಾಹಿತಿ ನೀಡಿದರು.

ಆ. 20 ರಂದು ಪೂರ್ವಾರಾಧನೆ, 21 ರಂದು ಮಧ್ಯಾರಾಧನೆ ಹಾಗೂ 22 ರಂದು ಉತ್ತರಾರಾಧನೆ ನೆರವೇರಲಿದೆ. ಮಂತ್ರಾಲಯದ ಶ್ರೀ ಸುಶಮೀಂದ್ರ ತೀರ್ಥರಿಂದ ಸ್ಥಾಪನೆಯಾದ ಬೃಂದಾವನದಲ್ಲಿ ಮಂತ್ರಾಲಯದಂತೆ ಆರಾಧನಾ ಮಹೋತ್ಸವ ನೆರವೇರಲಿದೆ. ಉತ್ಸವದಲ್ಲಿ ಪಾಲ್ಗೊಂಡು ರಾಯರ ಸೇವೆ ಮಾಡಲು ಭಕ್ತರಿಗೆ ಮುಕ್ತ ಅವಕಾಶ ನೀಡಲಾಗಿದೆ ಎಂದರು.

ಮೂರು ದಿನ ಆಂಜನೇಯ ಸ್ವಾಮಿ ಹಾಗೂ ರಾಯರ ಬೃಂದಾವನಕ್ಕೆ ಬೆಳಗ್ಗೆ 6 ರಿಂದ ಪಂಚಾಮೃತ ಅಭಿಷೇಕ, ಅಷ್ಟೋತ್ತರ ಹಾಗೂ ಮಹಾಮಂಗಳಾರತಿ, ಮಧ್ಯಾಹ್ನ 12ಕ್ಕೆ ಮಹಾನೈವೇದ್ಯ, ಹಸ್ತೋದಕ ಹಾಗೂ ಅಲಂಕಾರ ಸೇವೆಗಳು ನೆರವೇರಲಿವೆ. ರಾತ್ರಿ 8 ಕ್ಕೆ ದೇವಾಲಯದ ಪ್ರಾಂಗಣದಲ್ಲಿ ಪ್ರಾಕಾರೋತ್ಸವ, ಅಷ್ಟಾವಧಾನ ಹಾಗೂ ಮಹಾಮಂಗಳಾರತಿ ನೆರವೇರಲಿದೆ ಎಂದರು.

ನಿತ್ಯ ಮಧ್ಯಾಹ್ನ 1 ರಿಂದ ಭಕ್ತರಿಗೆ ಪ್ರಸಾದ ವಿನಿಯೋಗ ಸಂಜೆ 6 ರಿಂದ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. 5 ಸಾವಿರಕ್ಕೂ ಹೆಚ್ಚಿನ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ. ಅಂತಿಮ ಹಂತದ ಸಿದ್ಧತೆಗಳು ನಡೆಯುತ್ತಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ರಾಯರ ಸೇವೆ ಮಾಡಬೇಕು ಎಂದು ವಿನಂತಿಸಿದರು.

ಸಭೆಯಲ್ಲಿ ಸೇವಾ ಸಮಿತಿಯ ನೀಲಕಂಠಯ್ಯ, ಗೋಪಾಲ್ ಲಾಡ್, ಪೀತಾಂಬರ ರಾವ್, ಮಾರುತಿ, ಶ್ರೀನಿವಾಸ್, ಉಮೇಶ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net