

ಬೆಂಗಳೂರು: ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ ಆವರಣದಲ್ಲಿ ಗುರುವಾರ (ಫೆ.27) ದಿಂದ ಮೂರು ದಿನಗಳ ರಾಷ್ಟ್ರೀಯ ತೋಟಗಾರಿಕಾ ಮೇಳ 2025 ನಡೆಯಲಿದೆ ಎಂದು ಆಯೋಜನ ಸಮಿತಿ ಅಧ್ಯಕ್ಷ ಡಾ.ತುಷಾರ್ ಬೆಹೇರಾ ತಿಳಿಸಿದ್ದಾರೆ. ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ವಿವರಣೆ ನೀಡಿದ ಅವರು, ವಿಕಸಿತ ಭಾರತದ ಪರಿಕಲ್ಪನೆಗೆ ತೋಟಗಾರಿಕಾ ಕ್ಷೇತ್ರ ಕೂಡ ಪೂರಕವಾಗಿದ್ದು, ಆ ಉದ್ದೇಶದಿಂದ ವಿಕಸಿತ ಭಾರತಕ್ಕಾಗಿ ತೋಟಗಾರಿಕಾ ಮೇಳವನ್ನು ಆಯೋಜಿಸಲಾಗಿದೆ ಎಂದರು. ಪೋಷಣೆ, ಸಬಲೀಕರಣ ಮತ್ತು ಜೀವನೋಪಾಯದ ಹಿನ್ನೆಲೆಯಲ್ಲಿ ತೋಟಗಾರಿಕಾ ಮೇಳದ ಮೂಲಕ ಪೌಷ್ಟಿಕಾಂಶಯುಕ್ತ ಬೆಳೆಯನ್ನು ಬೆಳೆಯುವ ತಂತ್ರಜ್ಞಾನ ಮತ್ತು ವಿಧಿಗಳ ಕುರಿತ ಕಾರ್ಯಕ್ರಮಗಳನ್ನು ಮೇಳದಲ್ಲಿ ಪರಿಚಯಿಸಲಾಗುತ್ತದೆ. ಸಾಮಾಜಿಕವಾಗಿ ಹೊಂದಿಕೊಳ್ಳುವ ಹಾಗೂ ಆರ್ಥಿಕವಾಗಿ ಲಾಭದಾಯಕ ಮತ್ತು ಪರಿಸರಕ್ಕೆ ಅನುಕೂಲಕರ ತೋಟಗಾರಿಕೆ ಬೆಳೆಗಳ ಮೂಲಕ ಉತ್ಪಾದನೆ ಹಾಗೂ ಆದಾಯವನ್ನು ಹೆಚ್ಚಿಸಿ ಜೀವನೋಪಾಯವನ್ನು ಸುಧಾರಿಸುವ ನಿಟ್ಟಿನಲ್ಲಿ ತೋಟಗಾರಿಕಾ ಕ್ಷೇತ್ರದಲ್ಲಿ ತರಬೇಕಾದ ಬದಲಾವಣೆಗಳ ಕುರಿತು ಚರ್ಚೆ ನಡೆಯಲಿದೆ ಎಂದು ಡಾ.ತುಷಾರ್ ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಆಯೋಜನ ಸಮಿತಿ ಕಾರ್ಯದರ್ಶಿ ಡಾ.ಶಂಕರ ಹೆಬ್ಬಾರ ಮತ್ತಿತರರಿದ್ದರು.
ಫೆ.27 ರಿಂದ ಮಾ.1ರವರೆಗೆ ಮೂರು ದಿನಗಳ ಕಾಲ ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಕೇಂದ್ರದಲ್ಲಿ ನಡೆಯುವ ಮೇಳದಲ್ಲಿ ಸುಮಾರು 250 ಮಳಿಗೆಗಳಲ್ಲಿ ವಿವಿಧ ಸಂಸ್ಥೆಗಳು ತೋಟಗಾರಿಕಾ ತಂತ್ರಜ್ಞಾನಗಳ ಕುರಿತು ಪ್ರದರ್ಶನ ನೀಡಲಿದ್ದು, 75 ಸಾವಿರ ರೈತರು, ತೋಟಗಾರಿಕೆ ಕ್ಷೇತ್ರದ ತಜ್ಞರು ಭಾಗವಹಿಸುವ ನಿರೀಕ್ಷೆ ಇದೆ. ಮೇಳದಲ್ಲಿ ಭಾಗಿಯಾಗುವ ರೈತರಿಗೆ ತಳಿಗಳ ಸುಧಾರಣೆ, ಬೆಳೆ ಉತ್ಪಾದನೆ, ಬೆಳೆ ಸಂರಕ್ಷಣೆ, ಮೌಲ್ಯ ವೃದ್ಧಿ, ತೋಟಗಾರಿಕಾ ಯಂತ್ರೋಪಕರಣಗಳು ಬಗ್ಗೆ ಮಾಹಿತಿ ನೀಡಲಾಗುತ್ತದೆ.