

ನಂಜನಗೂಡು: ಪಟ್ಟಣದ ಪ್ರವಾಸಿ ಮಂದಿರದ ಬಳಿ ಇರುವ ಸಸ್ಯಕಾಶಿಯನ್ನು ಬಟಾನಿಕಲ್ ಗಾರ್ಡನ್ ಮಾದರಿಯಲ್ಲಿ ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ಭರವಸೆ ನೀಡಿದರು.
ಅವರು ಪಟ್ಟಣದ ಸಸ್ಯಕಾಶಿ, ಹುಲ್ಲಹಳ್ಳಿ ರಸ್ತೆ ಅಭಿವೃದ್ಧಿ ಸೇರಿದಂತೆ, ಉಪ್ಪಿನ ಹಳ್ಳಿ ಗ್ರಾಮದಲ್ಲಿ ಅಂಬೇಡ್ಕರ್ ಭವನದ ನಿರ್ಮಾಣ, ಮಾಡ್ರಹಳ್ಳಿ ಮತ್ತು ಶ್ರೀನಗರ ಗ್ರಾಮಗಳಲ್ಲಿ ರಸ್ತೆಗಳಿಗೆ 3.13 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಮಂಗಳವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ನಂಜನಗೂಡು ಪಟ್ಟಣದ ಪ್ರವಾಸಿ ಮಂದಿರದ ಬಳಿಯ ಸಸ್ಯಕಾಶಿ ಅಭಿವೃದ್ಧಿಗೆ ಕಳೆದ ಬಾರಿ 7 ಕೋಟಿ ರೂ. ಬಿಡುಗಡೆಯಾಗಿತ್ತು. ಇದರಲ್ಲಿ ಸುಮಾರು ಮೂರು ಕೋಟಿ ರೂ.ವೆಚ್ಚದಲ್ಲಿ ಕಾಮಗಾರಿ ನಡೆದಿತ್ತು. ಇದೀಗ ಉಳಿದ ಕಾಮಗಾರಿಯನ್ನು ಮುಂದುವರಿಸಲಾಗುತ್ತದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ತಿಳಿಸಿದರು.
ಸಸ್ಯಕಾಶಿ ಅಭಿವೃದ್ಧಿಯಾಗುವುದರಿಂದ ಇಲ್ಲಿನ ಜನರಿಗೆ ಅನುಕೂಲವಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಜಾರಕಿಹೊಳಿ ಅವರ ಸಹಕಾರದೊಂದಿಗೆ ಸಸ್ಯಕಾಶಿಯನ್ನು ಪೂರ್ಣಗೊಳಿಸಲಾಗುವುದು ಎಂದರು.
ಪಟ್ಟಣದಿಂದ ಹುಲ್ಲಹಳ್ಳಿ ಗ್ರಾಮಕ್ಕೆ ತೆರಳುವ ರಸ್ತೆ ಹದಗೆಟ್ಟಿದ್ದು ಈಗಾಗಲೇ ಎರಡು ಕೋಟಿ ರೂ. ಬಿಡುಗಡೆಯಾಗಿದ್ದು, ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ತಾಲೂಕಿನ ಹಲವು ಸಿಸಿ ರಸ್ತೆಗಳು, ಅಂಬೇಡ್ಕರ್ ಭವನಗಳು ನಿರ್ಮಾಣವಾಗಲಿವೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಕುರಹಟ್ಟಿ ಮಹೇಶ್, ಉಪ್ಪಿನಹಳ್ಳಿ ಶಿವಣ್ಣ, ಉಪ್ಪಿನ ಹಳ್ಳಿ ದೇವರಾಜ್, ಪಿಡಬ್ಲ್ಯೂಡಿ ಬಸವರಾಜ್, ಸಿ.ಎಂ.ಶಂಕರ್, ನಗರಸಭಾಧ್ಯಕ್ಷ ಶ್ರೀಕಂಠ ಸ್ವಾಮಿ, ಉಪಾಧ್ಯಕ್ಷ ರಿಹಾನ ಬಾನು, ಚಂದನ್ ಗೌಡ ಸೇರಿದಂತೆ ಇತರರು ಇದ್ದರು.