‘ಹೆಸರು’ ಇಲ್ಲದಂತಾದ ಬೆಳೆ, ಉಳ್ಳಾಗಡ್ಡಿ, ಮೆಣಸಿನಕಾಯಿ ಮೇಲೆ ನಿರೀಕ್ಷೆ

8NRGL3- crop loss
Published on

ನರೇಗಲ್ಲ: ಪಟ್ಟಣ ಸೇರಿ ಹೋಬಳಿಯಾದ್ಯಂತ ಹವಾಮಾನ ವೈಪರಿತ್ಯದ ಪರಿಣಾಮ ಪ್ರಸಕ್ತ ವರ್ಷದ ಮುಂಗಾರು ಸಂಪೂರ್ಣ ಕೈಕೊಟ್ಟಿದೆ. ನೆರೆ- ಬರ ಎರಡೂ ಅಲ್ಲದ ವಿಚಿತ್ರ ಪರಿಸ್ಥಿತಿ ಎದುರಾಗಿದೆ.


ಈ ಭಾಗದ ಮುಂಗಾರಿನ ಪ್ರಮುಖ ವಾಣಿಜ್ಯ ಬೆಳೆ ಹೆಸರು ಸಂಪೂರ್ಣ ಕೈಕೊಟ್ಟಿದ್ದು, ಉಳ್ಳಾಗಡ್ಡಿ ಮತ್ತು ಮೆಣಸಿನಕಾಯಿ ಬೆಳೆಯ ಮೇಲೆ ರೈತರು ನಿರೀಕ್ಷೆ ಇಟ್ಟುಕೊಂಡಿದ್ದಾರೆ.


ಮುಂಗಾರಿನ ಪ್ರಾರಂಭದಲ್ಲಿ ಸುರಿದ ಅಲ್ಪ- ಸ್ವಲ್ಪ ಮಳೆಯನ್ನು ನೆಚ್ಚಿಕೊಂಡು ಸುಮಾರು 35 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬಿತ್ತನೆ ಮಾಡಲಾಗಿತ್ತು. ಪ್ರಾರಂಭದಲ್ಲಿ ಮಳೆ ಕೈಕೊಟ್ಟ ಪರಿಣಾಮ ಮೊಳಕೆಯೊಡೆದ ಹೆಸರು ಹೇಳ ಹೆಸರಿಲ್ಲದಂತಾಯಿತು. ನಂತರದಲ್ಲಿ ಸುರಿದ ಮಳೆಗೆ ಅಳಿದುಳಿದ ಬೆಳೆ ರೈತರ ಕೈ ಸೇರಿತು. ಹೆಸರು ಬೆಳೆಗೆ ಪ್ರಸಕ್ತ ವರ್ಷ ದಾಖಲೆ ಬೆಲೆ ಬಂದಿದೆ. ಆದರೆ, ರೈತರ ಹತ್ತಿರ ಬೆಳೆಯೇ ಇಲ್ಲದಾಗಿದ್ದು, ರೈತರಿಗೆ ಭಾರಿ ನಿರಾಸೆಯುಂಟಾಗಿದೆ. ಹವಾಮಾನ ವೈಪರೀತ್ಯದ ಪರಿಣಾಮ ಇಳುವರಿಯಲ್ಲಿ ಭಾರಿ ಇಳಿಕೆಯಾಗಿದೆ. ಬೀಜ, ಗೊಬ್ಬರ ಬಿತ್ತನೆ ಸೇರಿ ಇತರೆ ಖರ್ಚುಗಳು ಮರಳದಂತಾಗಿದೆ.
ಹೆಸರಿನ ನಂತರ ಉಳ್ಳಾಗಡ್ಡಿ ಮತ್ತು ಮೆಣಸಿನಕಾಯಿ ಬಿತ್ತನೆ ಮಾಡಿದ ರೈತರಿಗೆ ಮತ್ತೆ ಬರ ಎದುರಾಯಿತು. ಬಿತ್ತನೆಯಾದ ಒಂದು ತಿಂಗಳವರೆಗೂ ಒಂದು ಹನಿಯೂ ಮಳೆಯಾಗಲಿಲ್ಲ. ಇನ್ನೇನೂ ಬೆಳೆ ಹರಗಬೇಕು ಎನ್ನುವಷ್ಟರಲ್ಲಿ ಕಳೆದ ವಾರ ಮಳೆಯಾಗಿದೆ. ಇತ್ತ ಬರವೂ ಅಲ್ಲ ಇತ್ತ ನೆರೆಯು ಅಲ್ಲದ ಪರಿಸ್ಥಿತಿ ನಿರ್ವಣವಾಗಿದೆ.


ಬೆಳೆ ಹಾನಿ-ಪರಿಹಾರವಿಲ್ಲ:
ಕಳೆದ ಐದಾರು ವರ್ಷಗಳಿಂದ ಹವಾಮಾನ ವೈಪರೀತ್ಯದ ಪರಿಣಾಮ ಬಿತ್ತಿದ ಬೆಳೆ ಕೈ ಸೇರುತ್ತಿಲ್ಲ. ಆದ್ದರಿಂದ, ಬೆಳೆ ವಿಮೆಯಾದರೂ ಕೈ ಹಿಡಿಯಬಹುದು ಎಂಬ ಆಸೆಯಿಂದ ರೈತರು ಸಾಲ- ಸೂಲ ಮಾಡಿ ಬೆಳೆ ವಿಮೆ ಪಾವತಿಸುತ್ತಾ ಬಂದಿದ್ದಾರೆ.ಆದರೆ, ಬೆಳೆ ಹಾನಿಗೆ ಪರಿಹಾರವಾಗಲಿ, ಬೆಳೆ ವಿಮೆಯಾಗಲಿ ಪಾವತಿಯಾಗಿಲ್ಲ.ಇದರಿಂದಾಗಿ ರೈತರು ಮತ್ತಷ್ಟು ಸಂಕಷ್ಟ ಅನುಭವಿಸುವಂತಾಗಿದೆ.

ದಿನದಿಂದ ದಿನಕ್ಕೆ ವ್ಯವಸಾಯ ಮಾಡುವುದು ದುಸ್ತರವಾಗಿದೆ. ನರೇಗಲ್ಲ ಹೋಬಳಿಯು ಸಂಪೂರ್ಣ ಮಳೆಯಾಶ್ರಿತ ಪ್ರದೇಶವಾಗಿದ್ದು, ಯಾವುದೇ ನೀರಾವರಿ ಯೋಜನೆಗಳಿಲ್ಲ. ಕಾಲಕಾಲಕ್ಕೆ ಉತ್ತಮ ಮಳೆಯಾದರೆ ಮಾತ್ರ ಬೆಳೆ. ಇಲ್ಲದಿದ್ದರೆ, ಬರ ಬರುತ್ತದೆ. ಪ್ರಸಕ್ತ ಸಾಲಿನಲ್ಲೂ ಬರದ ಛಾಯೆ ಮೂಡಿದ್ದು, ರಾಜ್ಯ ಸರ್ಕಾರ ತಾಲೂಕನ್ನು ಬರ ಪ್ರದೇಶವೆಂದು ಘೊಷಿಸಿ ಪರಿಹಾರ ವಿತರಣೆಗೆ ಮುಂದಾಗಬೇಕು. | ಚಂದ್ರು ಲಕ್ಕನಗೌಡ್ರ, ಉದಯ ಕಳಕೊಣ್ಣವರ ನರೇಗಲ್ಲ ರೈತರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net