

ಗೋಣಿಕೊಪ್ಪ: ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ವಲಯ ಅರಣ್ಯಾಧಿಕಾರಿ ಮತ್ತು ಉಪ ವಲಯ ಅರಣ್ಯಾಧಿಕಾರಿ ಹುದ್ದೆಯ ನೇಮಕಾತಿಯಲ್ಲಿ ಬಿ.ಎಸ್ಸಿ ಅರಣ್ಯ ಶಾಸ್ತ್ರ ಪದವಿಯನ್ನು ಕನಿಷ್ಠ ವಿದ್ಯಾರ್ಹತೆಯನ್ನಾಗಿ ಮಾಡುವಂತೆ ಒತ್ತಾಯಿಸಿ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ 17 ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆ ಸ್ಥಳಕ್ಕೆ ಭಾನುವಾರ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಭೇಟಿ ನೀಡಿ ಮಾಹಿತಿ ಪಡೆದರು.
ವಿದ್ಯಾರ್ಥಿಗಳು ಮಾತನಾಡಿ, ಅರಣ್ಯ ಇಲಾಖೆಯಲ್ಲಿ ವಿವಿಧ ಹುದ್ದೆಗಳಾದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ವಲಯ ಅರಣ್ಯಾಧಿಕಾರಿ ಮತ್ತು ಉಪ ವಲಯ ಅರಣ್ಯಾಧಿಕಾರಿ ಹುದ್ದೆಗಳಿಗೆ ಬಿ.ಎಸ್ಸಿ ಅರಣ್ಯ ಶಾಸ್ತ್ರ ಪದವೀಧರರನ್ನೇ ನೇರ ನೇಮಕಾತಿ ಮಾಡುವ ಮೂಲಕ (ಅರಣ್ಯಶಾಸ್ತ್ರ)ದಲ್ಲಿ ವಿಶೇಷ ಪರಿಣತಿ ಹೊಂದಿರುವ ಪದವೀಧರರ ಜ್ಞಾನ ಮತ್ತು ಅನುಭವವನ್ನು ರಚನಾತ್ಮಕವಾಗಿ ಬಳಸಿಕೊಳ್ಳಬೇಕೆಂದು ಒತ್ತಾಯಿಸಿದರು.
ಬಿ.ಎಸ್ಸಿ (ಅರಣ್ಯಶಾಸ್ತ್ರ) ಪದವೀಧರರನ್ನು ಅರಣ್ಯ ಇಲಾಖೆ ತನ್ನ ಹುದ್ದೆಗಳಿಗೆ ಶೇ.100ರಷ್ಟು ಪರಿಗಣಿಸುತ್ತಿಲ್ಲ. ಅರಣ್ಯ ಹುದ್ದೆಗಳಿಗೆ ಹಾಲಿ ಇರುವ ನೇರ ನೇಮಕಾತಿಯನ್ನು ರದ್ದುಗೊಳಿಸಿದರೆ ಬಿ.ಎಸ್ಸಿ (ಅರಣ್ಯಶಾಸ್ತ್ರ) ಮತ್ತು ಇತರ ವಿಜ್ಞಾನ ಪದವೀಧರರಿಗೆ ಅನ್ಯಾಯವಾಗುತ್ತದೆ ಎಂದರು.
ವಿದ್ಯಾರ್ಥಿಗಳ ಮನವಿಯನ್ನು ಸ್ವೀಕರಿಸಿದ ಶಾಸಕ ಎ.ಎಸ್. ಪೊನ್ನಣ್ಣ ಸಮಸ್ಯೆಯನ್ನು ಆದಷ್ಟು ಬೇಗ ಇತ್ಯರ್ಥಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.