ಹಾಪ್​ಕಾಮ್ಸ್ 'ಮಾವು-ಹಲಸು' ಮೇಳಕ್ಕೆ ಚಾಲನೆ; ಶೇ.5-10 ರಿಯಾಯಿತಿ ದರದಲ್ಲಿ ಮಾರಾಟ

Mango
Published on

ಬೆಂಗಳೂರು: ಹಡ್ಸನ್​ ವೃತ್ತದ ಬಳಿಯಿರುವ ಹಾಪ್​ಕಾಮ್ಸ್​ ಮಾರಾಟ ಮಳಿಗೆಯಲ್ಲಿ ಆಯೋಜಿಸಿದ್ದ "ಮಾವು ಹಾಗೂ ಹಲಸು ಮೇಳ&2024'ಕ್ಕೆ ತೋಟಗಾರಿಕಾ ಇಲಾಖೆ ಹೆಚ್ಚುವರಿ ನಿರ್ದೇಶಕ ಪರಶಿವಮೂರ್ತಿ ಮಂಗಳವಾರ ಚಾಲನೆ ನೀಡಿದರು.

ಕಾರ್ಬೈಡ್​ರಹಿತವಾದ ವಿವಿಧ ರುಚಿತ ಆರೋಗ್ಯಕರ ಮಾವುಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಜತೆಗೆ ವಿಶೇಷ ಸಂಚಾರಿ ಮಾರಾಟ ವ್ಯವಸ್ಥೆ ಮಾಡಿದೆ. ಪ್ರಸ್ತುತ ಈ ಅವಧಿಯಲ್ಲಿ ಹಾಪ್​ಕಾಮ್ಸ್​ ಸಂಸ್ಥೆಯು 500 ಟನ್​ ಮಾವು ಹಾಗೂ 100 ಟನ್​ ಹಲವು ಮಾರಾಟದ ಗುರಿ ಹೊಂದಿದೆ ಎಂದು ತಿಳಿಸಿದರು. ಮಾರ್ಚ್​ ವೇಳೆಗೆ ಸುರಿದ ಮಳೆ ಮಾವು ಬೆಳೆಗೆ ಸಹಾಯವಾಗಿದೆ. ಹೀಗಾಗಿ ರುಚಿಕರವಾದ ಹಾಗೂ ದೊಡ್ಡಗಾತ್ರ ಮಾವಿನ ಹಣ್ಣುಗಳು ಮಾರುಕಟ್ಟೆಗೆ ಬರುತ್ತಿವೆ ಎಂದು ತಿಳಿಸಿದರು.

ಹಾಪ್​ಕಾಮ್ಸ್​ ಸಂಸ್ಥೆ ಅಧ್ಯಕ್ಷ ಎನ್​. ಗೋಪಾಲಕೃಷ್ಣ ಮಾತನಾಡಿ, ಕಳೆದ 6 ದಶಕಗಳಿಂದ ರಾಜಧಾನಿಯ ಗ್ರಾಹಕರಿಗೆ ಹಾಪ್​ ಕಾಮ್ಸ್​ ತಾಜಾ ಹಣ್ಣು ಮತ್ತು ತರಕಾರಿಗಳನ್ನು ಸರಬರಾಜು ಮಾಡುತ್ತಿದೆ. ಸಂಸ್ಥೆಯು ಆಯಾ ಋತುಮಾನಗಳಲ್ಲಿ ಲಭ್ಯವಾಗುವ ಹಣ್ಣು ಮತ್ತು ತರಕಾರಿಗಳಿಗೆ ಹಾಗೂ ಹಬ್ಬದ ಸಂದರ್ಭಗಳಲ್ಲಿ ವಿಶೇಷ ಮೇಳಗಳನ್ನು ಆಯೋಜಿಸುವ ಮೂಲಕ ಮಾರುಕಟ್ಟೆ ಒದಗಿಸಿ ರೈತರಿಗೆ ನೆರವಾಗುತ್ತಿದೆ. ಸದ್ಯ ಹವಾಮಾನ ವೈಪರೀತ್ಯದಿಂದ ರಾಜ್ಯದಲ್ಲಿ ಶೇ.30 ಮಾವು ಇಳುವರಿ ಕಡಿಮೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮೇಳದಲ್ಲಿ ಹೆಚ್ಚು ವ್ಯಾಪಾರವಾದರೆ ರೈತರಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಒಟ್ಟು 1,209 ಹೆಕ್ಟೇರ್​ ಪ್ರದೇಶದಲ್ಲಿ ಪ್ರಮುಖ ಹಣ್ಣಿನ ಬೆಳೆಯಾಗಿರುವ ಮಾವು ಬೆಳೆಯಲಾಗುತ್ತಿದೆ. ಪ್ರಮುಖವಾಗಿ ತುಮಕೂರು, ದಣ ಕನ್ನಡ, ಹಾಸನ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದ್ದು, 46,478 ಮೆಟ್ರಿಲ್​ ಟನ್​ ಉತ್ಪಾದನೆಯಾಗುತ್ತಿದೆ. ಪ್ರಸ್ತುತ ಹೆಚ್ಚಿನ ರೈತರು ವಿವಿಧ ತಳಿ ಹಲಸಿನ ಹಣ್ಣುಗಳನ್ನೂ ಬೆಳೆಯುತ್ತಿದ್ದಾರೆ. - ಮಿರ್ಜಿ ಉಮೇಶಶಂಕರ, ಹಾಪ್​ಕಾಮ್ಸ್​ ನಿರ್ದೇಶಕ

ವಿವಿಧ ತಳಿ ಮಾವು ಲಭ್ಯ

ಮೇಳದಲ್ಲಿ ವಿವಿಧ ತಳಿಗಳ ಪ್ರದರ್ಶನ ಏರ್ಪಡಿಸಿದ್ದು, 31ರವರೆಗೆ ಶೇ.5 ರಿಂದ 10 ರಿಯಾಯಿತಿ ದರದಲ್ಲಿ ಮಾವು ಹಾಗೂ ಹಲಸಿನ ಹಣ್ಣು ಖರೀದಿಸಬಹುದಾಗಿದೆ. ಬಾದಾಮಿ, ರಸಪುರಿ, ಸೇಂದೂರ, ಮಲಗೋವಾ, ಮಲ್ಲಿಕಾ, ಬಂಗನಪಲ್ಲಿ, ದಶೇರಿ, ಕಾಲಪಾಡು, ಕೇಸರ್​, ನೀಲಂ, ತೋತಾಪುರಿ, ಇಮಾಂಪಸಂದ ತಳಿಯ ಮಾವಿನ ಹಣ್ಣುಗಳು ಹಾಗೂ ಚಂದ್ರಹಲಸು ಸೇರಿ ವಿವಿಧ ಸ್ಥಳಿಯ ತಳಿಗಳ ಹಲಸಿನ ಹಣ್ಣುಗಳು ಮೇಳದ ಪ್ರಮುಖ ಆಕರ್ಷಣೆಗಳಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net