ದಸರಾ ಕ್ರೀಡೋತ್ಸವ ಭಾವೈಕ್ಯತೆಯ ಸಂಗಮ : ಬಿ.ರಮಾನಾಥ ರೈ ಅಭಿಮತ

New Project (14)
Published on

ವಿಜಯವಾಣಿ ಸುದ್ದಿಜಾಲ ಬಂಟ್ವಾಳ

ಮಾನವೀಯತೆಯೇ ಎಲ್ಲ ಧರ್ಮದ ಬುನಾದಿ. ನಾಡಹಬ್ಬ ದಸರಾ ಭಾವೈಕ್ಯತೆಯ ಸಂಗಮ, ಸಂಭ್ರಮ. ಜಾತಿ, ಧರ್ಮ ಭೇದಗಳನ್ನು ಮರೆತು ಎಲ್ಲರೂ ಒಂದೆಡೆ ಬೆರೆಯುವುದೇ ಧಾರ್ಮಿಕ ಆಚರಣೆಗಳ ನೈಜ ಸಿದ್ಧಾಂತ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.

ಶ್ರೀ ಶಾರದೋತ್ಸವ ಸೇವಾ ಸಮಿತಿ ಇರ್ವತ್ತೂರುಪದವು ವತಿಯಿಂದ ಮೂಡುಪಡುಕೋಡಿ ಶಾಲಾ ಮೈದಾನದಲ್ಲಿ ಭಾನುವಾರ ನಡೆದ ‘ದಸರಾ ಕ್ರೀಡೋತ್ಸವ 2025’ದಲ್ಲಿ ಸಾಧಕರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ದಸರಾ ಹಬ್ಬ ಸಾಮಾಜಿಕ ಸಾಮರಸ್ಯಕ್ಕೆ ಮುನ್ನುಡಿಯಾಗಲಿ. ಮದ, ಮತ್ಸರವನ್ನು ಮರೆತು ಎಲ್ಲರೂ ಪ್ರೀತಿ, ವಿಶ್ವಾಸದಿಂದ ಮುನ್ನಡೆಯೋಣ. ಒಂದೇ ಊರಿನಲ್ಲಿ ಇಷ್ಟೊಂದು ಪ್ರತಿಭೆಗಳಿರುವುದು ನಿಜಕ್ಕೂ ಆಶ್ಚರ್ಯ, ಸಂತೋಷದ ಸಂಗತಿ. ಹುಟ್ಟೂರಿನ ಸನ್ಮಾನ ಎಲ್ಲಕ್ಕಿಂತಲೂ ಮಿಗಿಲು. ನೈಜ ಪ್ರತಿಭೆಗಳನ್ನು ಗುರುತಿಸಿ ಗೌರವಿಸಿರುವುದು ಸಂಘಟಕರ ಮೌಲ್ಯವನ್ನೂ ಎತ್ತಿ ಹಿಡಿದಿದೆ. ಇಂತಹ ಕಾರ್ಯಗಳು ಇನ್ನಷ್ಟು ವಿಸ್ತರಿಸಲಿ ಎಂದು ಶುಭ ಹಾರೈಸಿದರು.

ಡಾ.ಮುಸ್ತಾಫ ಬಸ್ತಿಕೋಡಿ ಮಾತನಾಡಿ, ಶಿಕ್ಷಣದೊಂದಿಗೆ ಸಂಸ್ಕಾರವೂ ಅಗತ್ಯ. ಅತ್ಯುತ್ತಮ ಸಂಸ್ಕಾರ ಹೊಂದಿದ ವಿದ್ಯಾರ್ಥಿಗಳು ಬದುಕಿನಲ್ಲಿ ಮಹತ್ತರವಾಗಿದ್ದನ್ನು ಸಾಧಿಸಿದ ಉದಾರಹಣೆಯಿದೆ ಎಂದರು.

ಜಿಪಂ ಮಾಜಿ ಸದಸ್ಯ ಪದ್ಮಶೇಖರ ಜೈನ್, ವಕೀಲ ಹಾಗೂ ಮಂಗಳೂರು ವಿವಿ ಸೆನೆಟ್ ಸದಸ್ಯ ಸುರೇಶ್ ಕುಲಾಲ್, ಉದ್ಯಮಿ ಹಂಝ ಬಸ್ತಿಕೋಡಿ, ಪಿ.ಅಬ್ದುಲ್ ಕುಂಞಿ, ಮೋಹನ್ ಶೆಟ್ಟಿ ನರ್ವಲ್ದಡ್ಡ, ಮಹಮ್ಮದ್ ಶರೀಫ್, ಅರುಣ್ ಐತಾಳ್, ಶಾರದೋತ್ಸವ ಸೇವಾ ಸಮಿತಿಯ ಡಾ.ರಾಮಕೃಷ್ಣ ಎಸ್., ಸುಧೀಂದ್ರ ಶೆಟ್ಟಿ, ಜಯಚಂದ್ರ ಬೊಳ್ಮಾರು ಮತ್ತಿತರರು ಉಪಸ್ಥಿತರಿದ್ದರು.

ಧಾರ್ಮಿಕ ಕಾರ್ಯಕ್ರಮ ಮಾತ್ರವಲ್ಲದೆ ಸಾಮಾಜಿಕ, ಶೈಕ್ಷಣಿಕ, ಕ್ರೀಡೆ ಹಾಗೂ ಆರೋಗ್ಯ ಕ್ಷೇತ್ರದಲ್ಲೂ ಸೇವೆಯನ್ನು ವಿಸ್ತರಿಸಿರುವ ಇರ್ವತ್ತೂರುಪದವು ಶ್ರೀ ಶಾರದೋತ್ಸವ ಸೇವಾ ಸಮಿತಿ ಕಾರ್ಯ ಸ್ತುತ್ಯರ್ಹ. ಜಾತ್ಯಾತೀಯ ನೆಲೆಯಲ್ಲಿ ಎಲ್ಲ ಮನಸ್ಸುಗಳೂ ಒಂದಾಗಿವೆ. ಇದು ಎಲ್ಲರಿಗೂ ಮಾದರಿ. ಸುರೇಶ್ ಕುಲಾಲ್, ಸೆನೆಟ್ ಸದಸ್ಯರು ಮಂಗಳೂರು ವಿವಿ

‘ನಮ್ಮೂರ ಸಾಧಕರು’ ಗೌರವ

ಶೈಕ್ಷಣಿಕ ಕ್ಷೇತ್ರದ ಸಾಧಕ ಡಾ.ಮುಸ್ತಾಫ ಬಸ್ತಿಕೋಡಿ, ಉದ್ಯಮಿ ಲಾದ್ರೂ ಮಿನೇಜಸ್, ಮಾಧ್ಯಮ ಕ್ಷೇತ್ರದ ಐ.ಬಿ.ಸಂದೀಪ್ ಕುಮಾರ್, ರಾಜೇಶ್ ಶೆಟ್ಟಿ ದೋಟ, ಯಕ್ಷಗಾನ ಕಲಾವಿದ ಸೀತಾರಾಮ ಬಂಗೇರ ಕಜೆಕೋಡಿ, ರಂಗಭೂಮಿ ಕಲಾವಿದ ಹರೀಶ್ ಪೂಜಾರಿ ಆಲದಪದವು, ಭರತನಾಟ್ಯ ಹಾಗೂ ಕರಾಟೆ ಪಟು ವಿದುಷಿ ಸಹನಾ ಎಂ.ಶೆಟ್ಟಿ ನರ್ವಲ್ದಡ್ಡ ಅವರಿಗೆ ‘ನಮ್ಮೂರ ಸಾಧಕರು’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net