

ಬಾಗಲಕೋಟೆ: ಶಾಲೆಗೆ ಹೋಗಿ ಅಕ್ಷರಶಃ ಕಲಿಯಲಿಲ್ಲ. ಕುಟುಂಬದಿಂದ ಬಳುವಳಿಯಾಗಿ ಬಂದ ಕಲೆಯನ್ನೆ ನಂಬಿ ಜೀವನ ಸಾಗಿಸಿದರು. ಕಣ್ಣರೆಯಾಗುತ್ತಿರುವ ಗೊಂದಳಿ ಕಲೆ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಹಿರಿಯ ಕಲಾವಿದನಿಗೆ ಇದೀಗ ಗೌರವ ಡಾಕ್ಟರೇಟ್ ಪದವಿ ಒಲಿದು ಬಂದಿದೆ..!!
ಬಾಗಲಕೋಟೆ ಹಿರಿಯ ಕಂಚಿನ ಕಠದ ಗೊಂದಳಿ ಪದ ಕಲಾವಿದ ವೆಂಕಪ್ಪ ಅಂಬಾಜಿ ಸುಗತೇಕರಗೆ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಗೂಟಗೂಡಿಯ ಕರ್ನಾಟಕ ಜಾನಪದ ವಿಶ್ವ ವಿದ್ಯಾಲಯ ನೀಡುವ ಗೌರವ ಡಾಕ್ಟರೇಟ್ ಪದವಿ ಭಾಜನರಾಗಿದ್ದು, ಜಿಲ್ಲೆಯ ಸಾರ್ವಜನಿಕರು, ಕಲಾವಿದರಿಗೆ ಹೆಮ್ಮೆ ಮೂಡಿಸಿದೆ.
ವೆಂಕಪ್ಪ ೧೯೪೩ ಮೇ ೫ ರಂದು ಜನಿಸಿದರು. ತಂದೆ ಅಂಬಾಜಿ, ತಾಯಿ ಯಲ್ಲಮ್ಮ ಬಡತನ ನಡುವೆಯೂ ಗೊಂದಳಿ ಪದಗಳನ್ನು ಹಾಡುತ್ತಾ ಬದುಕಿದವರು. ಚಿಕ್ಕಂದಿನಿಂದಲು ಅದನ್ನು ನೋಡಿ ಬೆಳೆದ ವೆಂಕಪ್ಪ ಶಾಲೆಗೆ ಹೋಗಲಿಲ್ಲ. ಕುಟುಂಬದ ಕಲೆಯನ್ನು ಮುಂದುವರೆಸಿಕೊಂಡು ಹೋದರು. ಪತ್ನಿ ದುರ್ಗಾಬಾಯಿ ಹಾಗೂ ಮಕ್ಕಳು ಬೆನ್ನಲುಬಾಗಿ ನಿಂತರು. ಬಡತನವಿದ್ದರು ಕಲಾ ಸೇವೆ ಬಿಡಲಿಲ್ಲ. ಎಲ್ಲ ಸವಾಲ್‌ಗಳನ್ನು ಮೆಟ್ಟಿ ನಿಂತರು. ೭೯ ನೇ ವಯಸ್ಸಿನಲ್ಲಿಯೂ ಇಂದಿಗೂ ಗೊಂದಳಿ ಪದ ಹಾಡುತ್ತಾರೆ. ಇಳಿಯವಯಸ್ಸಿನಲ್ಲಿಯೂ ಕಾರ್ಯಕ್ರಮ ನೀಡುವುದು ನಿಲ್ಲಿಸಿಲ್ಲ.
ಪುರಂದರದಾಸರ ಪದಗಳು ಮತ್ತು ಶಿಶುನಾಳ ಶರೀಫರ ಪದಗಳು, ದೇವಿ ಪದಗಳು, ಬಿಡ ಪದಗಳು, ಮಡಿವಾಳ ರಾಚಯ್ಯ, ಕನಕದಾಸರು, ತತ್ವ ಪದಗಳು, ಅಂಬಾ ಭಾವಾನಿ ಪದಗಳು ಹಾಗೂ ಯಲ್ಲಮ್ಮ ಪದಗಳನ್ನು ಹಾಡುತ್ತಾರೆ. ಆಕಾಶವಾಣಿಯಲ್ಲಿ ೫೨, ದೂರದರ್ಶನದಲ್ಲಿ ೧೮ ಬಾರಿ ಕಾರ್ಯಕ್ರಮ ನೀಡಿದ್ದಾರೆ. ಆಂಧ್ರಪ್ರದೇಶದ ವಾರಂಗಲ್‌ನಲ್ಲಿ ಅಂತರ ರಾಷ್ಟ್ರೀಯ ಸಂಗೀತ ಸಮ್ಮೇಳನ, ಮಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಯುವ ಜನೋತ್ಸವ, ಬೆಳಗಾವಿಯ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ, ಮೈಸೂರು ದಸರಾ, ಹಂಪಿ, ಆನೆಗೊಂದಿ ಉತ್ಸವ ಸೇರಿದಂತೆ ವಿವಿಧೆಡೆ ಕಾರ್ಯಕ್ರಮ ನೀಡಿ ಜನಪ್ರಿಯರಾಗಿದ್ದಾರೆ.
ವಿವಿಧ ಪ್ರಶಸ್ತಿ: ವೆಂಕಪ್ಪ ಸುಗತೇಕರಗೆ ಕಲಾ ಸೇವೆ ಗುರುತಿಸಿ ಜಾನಪದ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಜಾನಪದ ಅಕಾಡೆಮಿ ಪ್ರಶಸ್ತಿ, ಜಾನಪದ ಲೋಕ, ಆಕಾಶವಾಣಿ ಬಿ.ಹೈ ಗ್ರೇಡ್ ಪ್ರಶಸ್ತಿ, ಸಿದ್ದೇಶ್ವರ ರತ್ನ ಪ್ರಶಸ್ತಿ, ಸಾಹಿತ್ಯ ಸಮ್ಮೇಳನ ಪ್ರಶಸ್ತಿ ಸೇರಿದಂತೆ ಸರ್ಕಾರ ಹಾಗೂ ಖಾಸಗಿ ಸಂಘ, ಸಂಸ್ಥೆಗಳು ಪ್ರಶಸ್ತಿಗಳನ್ನು ನೀಡಿವೆ.
ಡಿ.೧ ರಂದು ಪ್ರಶಸ್ತಿ ಪ್ರದಾನ: ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಗೂಟಗೂಡಿಯ ಕರ್ನಾಟಕ ಜಾನಪದ ವಿಶ್ವ ವಿದ್ಯಾಲಯವು ಡಿ.೧ ರಂದು ೬ನೇ ಮತ್ತು ೭ನೇ ಘಟಿಕೋತ್ಸವದಲ್ಲಿ ಕೆ.ಸಿ.ಜಾಗರಜ್ಜಿ, ಜೀವನರಾಂ ಸುಳ್ಳು, ತಲ್ಲೂರ ಶಿವರಾಂ ಶೆಟ್ಟರ, ವೆಂಕಪ್ಪ ಸುಗತೇಕರ, ಯಶವಂತ ಸರದೇಶಪಾಂಡೆ, ಬಸವರಾಜ ಕೆಂಚಿಗೇರಿ ಅವರಿಗೆ ಗೌರವ ಪ್ರಶಸ್ತಿ ನೀಡಲಾಗುತ್ತದೆ. ರಾಜ್ಯಪಾಲರು ಪದವಿ ಪ್ರದಾನ ಮಾಡಲಿದ್ದಾರೆ.
ಕೋಟ್…
ಗೊಂದಳಿ ಪದ ಕಲೆ ಇಂದು ಉಳಿಸಿ ಬೆಳೆಸಬೇಕಿದೆ. ನಮ್ಮ ಕುಟುಂಬದಲ್ಲಿ ಇದೇ ವೃತ್ತಿ, ಬದುಕು. ಇದು ಬಿಟ್ಟರೆ ಬೇರೆ ಗೊತ್ತಿಲ್ಲ. ೭೦ ವರ್ಷಗಳಿಂದ ಗೊಂದಳಿ ಪದ ಹಾಡುತ್ತಾ ಜೀವನ ಸಾಗಿಸಿದ್ದೇನೆ. ಕಷ್ಟ, ನಷ್ಟ ಏನೇ ಇರಲಿ. ಭಗವಂತ ಸೇವೆ ಇದು. ಅವಿರತವಾಗಿ ಮಾಡುತ್ತಿದ್ದೇವೆ. ಜಾನಪದ ವಿವಿ ಗೌರವ ಡಾಕ್ಟರೇಟ್ ನೀಡಿರುವುದು ಸಂತೋಷವಾಗಿದೆ. ಗೊಂದಳಿ ಕಲೆಗೆ ಒಲಿದ ಗೌರವವಿದು.
* ವೆಂಕಪ್ಪ ಸುಗತೇಕರ ಗೊಂದಳಿ ಕಲಾವಿದ ಬಾಗಲಕೋಟೆ