Honnavar Port ಸಂಪರ್ಕ ರಸ್ತೆ ನಿರ್ಮಾಣಕ್ಕೆ ವಿರೋಧಿಸಿ ಪ್ರತಿಭಟನೆ 40 ಕ್ಕೂ ಅಧಿಕ ಮೀನುಗಾರರ ಬಂಧನ

Honnavar Port
Published on

ಹೊನ್ನಾವರ: ಸ್ಥಳೀಯ ಮೀನುಗಾರರ ತೀವ್ರ ಪ್ರತಿರೋಧದ ನಡುವೆಯೂ ಪೊಲೀಸ್ ಸರ್ಪಗಾವಲಿನಲ್ಲಿ ಕಾಸರಕೋಡು (Honnavar Port) ಟಂಕಾ ಖಾಸಗಿ ಬಂದರು ಸಂಪರ್ಕಿಸುವ ರಸ್ತೆಗೆ ಸರ್ವೇ ಕಾರ್ಯವನ್ನು ಮಂಗಳವಾರ ನಡೆಸಲಾಯಿತು.

ಮಂಗಳವಾರ ಇಡೀ ದಿನ ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. 300 ಕ್ಕೂ ಅಧಿಕ ಪೊಲೀಸ್ ಅಧಿಕಾರಿ, ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಹೆದ್ದಾರಿ ಕಾಮಗಾರಿಗೆ ಎನ್‌ಎಚ್‌ಎಐ ಪರವಾಗಿ ಖಾಸಗಿ ಕಂಪನಿ ಅದಿಕಾರಿಗಳು ಸರ್ವೇಗೆ ಮುಂದಾಗಿದ್ದರು.

ಅದನ್ನು ವಿರೋಧಿಸಿ ಸ್ಥಳೀಯರು ತಂಡೋಪ ತಂಡವಾಗಿ ರಸ್ತೆಯ ಮೇಲೆ ನಿಂತು ಘೋಷಣೆಗಳನ್ನು ಕೂಗಿದರು. ನಂತರ ಸಮುದ್ರಕ್ಕೆ ಇಳಿದು ಪ್ರತಿಭಟಿಸಿದರು. ಕೆಲ ಹೊತ್ತು ಶಾಲಾ ಮಕ್ಕಳು ರಸ್ತೆಯ ಮೇಲೆ ಕುಳಿತು ಪ್ರತಿಭಟಿಸಿದ ಘಟನೆಯೂ ನಡೆಯಿತು.

ಪೊಲೀಸರು ಹಾಗೂ ಸ್ಥಳೀಯರ ನಡುವೆ ಮಾತಿನ ಚಕಮಕಿ ನಡೆಯಿತು. ನೂಕಾಟ ನಡೆಯಿತು. ಪೊಲೀಸರು ಮಧ್ಯಾಹ್ನ 12 ಗಂಟೆಯ ಹೊತ್ತಿಗೆ ಸುಮಾರು 40 ಮೀನುಗಾರರನ್ನು ಬಂಧಿಸಿದರು.

ನಾಲ್ವರು ಮಹಿಳೆಯರು ಅಸ್ವಸ್ಥರಾಗಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಒಬ್ಬ ಮಹಿಳೆ ತೀವ್ರವಾಗಿ ಅಸ್ವಸ್ಥರಾಗಿದ್ದು, ಆಕೆಯನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತು. ಮಧ್ಯಾಹ್ನ ನಂತರ ಪ್ರತಿಭಟನೆ ಕೊಂಚ ತಣ್ಣಗಾಗುತ್ತಿದ್ದಂತೆ ಸರ್ವೇ ಕಾರ್ಯ ಮುಂದುವರಿಸಿದರು.

ಭಟ್ಕಳ ಎಸಿ ಕಾವ್ಯಾರಾಣಿ, ಡಿವೈಎಸ್‌ಪಿ ಮಹೇಶ ಕೆ., ತಹಸೀಲ್ದಾರ್ ಪ್ರವೀಣ ಕರಾಂಡೆ, ಸಿಪಿಐ ಸಿದ್ರಾಮೇಶ್ವರ ಇತರರು ಸ್ಥಳದಲ್ಲಿ ಇದ್ದು, ಪ್ರತಿಭಟನೆ ನಿಯಂತ್ರಣಕ್ಕೆ ಯತ್ನಿಸಿದರು.

Honnavar Port ಹಿನ್ನೆಲೆ

ಹೊನ್ನಾವರ ಮೂಲದ ಹೊನ್ನಾವರ ಪೋರ್ಟ್ ಪ್ರೈವೇಟ್‌ ಲಿಮಿಟೆಡ್ ಎಂಬ ಕಂಪನಿಗೆ ಕಾಸರಕೋಡಿನ 92 ಎಕರೆ ಜಾಗವನ್ನು 2010 ರಲ್ಲಿ ರಾಜ್ಯ ಸರ್ಕಾರ 30 ವರ್ಷ ಲೀಸ್‌ಗೆ ನೀಡಿದೆ. ಆ ಬಂದರು ನಿರ್ಮಾಣಕ್ಕೆ ರಾಷ್ಟ್ರೀಯ  ಹೆದ್ದಾರಿ 66 ರಿಂದ 35 ಮೀಟರ್ ಸಂಪರ್ಕ ರಸ್ತೆ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ಅದಕ್ಕೆ ಕಾಸರಕೋಡಿನ 121 ಮನೆಗಳು ಸ್ವಾಧೀನವಾಗಲಿವೆ. ಅಲ್ಲದೇ ರೈಲ್ವೆ ಮಾರ್ಗ ನಿರ್ಮಾಣಕ್ಕೂ ಪರಿಸರ ಇಲಾಖೆಯ ಅನುಮತಿ ಪಡೆಯಲಾಗಿದೆ. ಅದಕ್ಕೆ ಸುಮಾರು 200 ಕ್ಕೂ ಅಽಕ ಮನೆಗಳು ಹೋಗಬಹುದು ಎಂದು ಅಂದಾಜಿಸಲಾಗಿದೆ. ತಮ್ಮ ನೆಲೆ ಕಳೆದುಕೊಳ್ಳುವ ಭೀತಿಯಲ್ಲಿ ಮೀನುಗಾರರು ಪ್ರತಿಭಟನೆ ನಡೆಸಿದ್ದಾರೆ. ಈ ಹಿಂದೆ ಸರ್ವೇ ಕಾರ್ಯಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಹಾಗಾಗಿ ನಿಷೇಧಾಜ್ಞೆ ಜಾರಿ ಮಾಡಿ, ಪೊಲೀಸ್ ಭದ್ರತೆಯಲ್ಲಿ ಸರ್ವೇ ಕಾರ್ಯ ನಡೆಸಲಾಗಿದೆ. ಸಮುದ್ರಕ್ಕೆ ಹಾರ್ತೇನೆ ಎಂದು ಬಾಲಕಿ ಬೆದರಿಕೆ

Honnavar Port ಪ್ರತಿಭಟನೆ ಸಂಬಂಧ ಮೀನುಗಾರರ ಬಂಧನವೊಂದನ್ನು ಖಂಡಿಸಿ ಬಾಲಕಿಯೊಬ್ಬಳ್ಳು ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ವಿಡಿಯೋ ವೈರಲ್ ಆಗಿದೆ. ಅಪೇಕ್ಷಾ ತಾಂಡೇಲ ಎಂಬ ವಿದ್ಯಾರ್ಥಿನಿ ಈ ಬೆದರಿಕೆ ಹಾಕಿದ್ದಾಳೆ. ಹಿಂದೆ ಚುನಾವಣೆ ಸಂದರ್ಭದಲ್ಲಿ ಆಗಮಿಸಿದ ಮಂಕಾಳ ವೈದ್ಯ ಅವರು ನಾನು ನಿಮ್ಮ ಜತೆ ಇದ್ದೇನೆ. ಬಂದರು ಕಾಮಗಾರಿ ಮಾಡಲು ಬಿಡುವುದಿಲ್ಲ ಎಂದು ಹೇಳಿದ್ದರು. ಈಗ ಎಲ್ಲಿ ಹೋದರು ಸಚಿವರು ಎಂದು ಬಾಲಕಿ ಪ್ರಶ್ನಿಸಿದ್ದಾಳೆ.

ಮೀನುಗಾರರನ್ನು ಶೀಘ್ರ ಬಿಡುಗಡೆ ಮಾಡದಿದ್ದಲ್ಲಿ ನಾನು ಸಚಿವರ ಹೆಸರು ಬರೆದಿಟ್ಟು ಸಮುದ್ರಕ್ಕೆ ಹಾರುತ್ತೇನೆ ಎಂದು ಬಾಲಕಿ ವಿಡಿಯೋ ಮೂಲಕ ಬೆದರಿಕೆ ಹಾಕಿದ್ದಾಳೆ. ನಾಲ್ಕು ವರ್ಷದಿಂದ ನಾವು ಹೋರಾಟ ಮಾಡುತ್ತ ಬಂದಿದ್ದೇವೆ. ಯಾವುದೇ ಜನಪ್ರತಿನಿಧಿಗಳು ನಮ್ಮ ಬೆಂಬಲಕ್ಕೆ ನಿಂತಿಲ್ಲ. ಹೀಗೆ ಮಾಡುವ ಬದಲು ರಾಷ್ಟ್ರಪತಿಗಳು ನಮಗೆ ದಯಾ ಮರಣ ಕರುಣಿಸಲಿ ಎಂದು ಕೂಡ ಬಾಲಕಿ ಮಾತನಾಡಿದ್ದಾಳೆ.

2022 ರಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಬಂದರು ನಿರ್ಮಾಣಕ್ಕೆ ಪ್ರಯತ್ನ ನಡೆದಿತ್ತು. ಆಗ ಆಗಮಿಸಿದ್ದ ಹಾಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಹಾಲಿ ಸಚಿವ ಮಂಕಾಳ ವೈದ್ಯ(Honnavar Port ) ಬಂದರು ಕಾಮಗಾರಿ ಮಾಡಲು ಅವಕಾಶ ಮಾಡುವುದಿಲ್ಲ ಎಂದು ಹೇಳಿಕೆ ನೀಡಿದ್ದರು.

ಈಗ ಅವರದ್ದೇ ಸರ್ಕಾರವಿದೆ. ಸ್ವತಃ ಕ್ಷೇತ್ರದ ಶಾಸಕರು ಬಂದರು ಸಚಿವರಾಗಿದ್ದಾರೆ. ಆದರೆ, ಮೀನುಗಾರರನ್ನು ಬಂಧನ ಮಾಡಿಸುತ್ತಿದ್ದಾರೆ. ಎಂದು ಆಕ್ರೋಶ ಹೊರ ಹಾಕಿದ್ದಾರೆ. ಮೀನುಗಾರರು ಈಗ ಡಿಕೆಶಿ ಮಾತನಾಡಿದ ವಿಡಿಯೋವನ್ನು ಹರಿಬಿಟ್ಟು ಎಲ್ಲಿ ಹೋಯಿತು ನಿಮ್ಮ ಭರವಸೆ, ಬದ್ಧತೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net